ಸೋಂದಾ ಇತಿಹಾಸೋತ್ಸವ 19ರಿಂದ

14 LAXMISH
Published on

ಶಿರಸಿ: ಸಮಾಜದಲ್ಲಿ ಇತಿಹಾಸದ ಬಗ್ಗೆ ಗಂಭೀರ ಜಾಗೃತಿ ಮೂಡಬೇಕು, ಸ್ಥಳೀಯ ಇತಿಹಾಸಕ್ಕೆ ಪ್ರಾಧಾನ್ಯತೆ ಸಿಗಬೇಕು ಎಂಬ ಉದ್ದೇಶದಿಂದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಹಮ್ಮಿಕೊಳ್ಳುತ್ತಿದ್ದೇವೆ. 7ನೇ ವರ್ಷದ ಸೋಂದಾ ಇತಿಹಾಸೋತ್ಸವ ಹಾಗೂ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಅ.19ಮತ್ತು 20ರಂದು ತಾಲೂಕಿನ ಸ್ವಾದಿ ಜೈನಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಲಕ್ಷ್ಮೀಶ ಸೋಂದಾ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಅ. 19ರಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಸ್ವಾದಿ ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ ವಹಿಸುವರು. ಮೈಸೂರಿನ ಪುರಾತತ್ವ ಸಂಗ್ರಹಾಲಯ ಪರಂಪರೆ ಆಯೋಗದ ಅಧ್ಯಕ್ಷ ದೇವರಾಜ ಎ. ಕಾರ್ಯಕ್ರಮ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವ ವಿದ್ಯಾಲಯ ಕುಲಪತಿ ಡಾ. ಡಿ.ವಿ. ಪರಶಿವಮೂರ್ತಿ ಅವರಿಗೆ ಈ ವರ್ಷದ ಸೋದೆ ಸದಾಶಿವರಾಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಪದ್ಮಶ್ರೀ ಪುರಸ್ಕೃತ ಸಂಶೋಧಕ ಪೊ›. ಪೇರ್ ಸಿಲ್ವನ್ ಫಿಲೋಜ ಫ್ರಾನ್ಸ್ , ಸೋದೆ ಅರಸು ವಂಶಸ್ಥ ಮಧುಲಿಂಗ ಒಡೆಯರ್, ಬೆಂಗಳೂರು ಮಿಥಿಕ್ ಸೊಸೈಟಿ ಉಪಾಧ್ಯಕ್ಷ ಡಾ. ವಿ. ಅನುರಾಧಾ, ಇತರರು ಉಪಸ್ಥಿತರಿರುವರು. ಇತಿಹಾಸಕಾರ ಡಾ. ಲಕ್ಷ್ಮೀಶ ಸೋಂದಾ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡುವರು ಎಂದು ತಿಳಿಸಿದರು.

ಉದ್ಘಾಟನೆಯ ದಿನ ಎರಡು ಗೋಷ್ಠಿಗಳು, ಅ. 20ರಂದು ನಾಲ್ಕು ಗೋೕಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳ ಉಪನಿರ್ದೇಶಕಿ ಡಾ. ಮಂಜುಳಾ, ಸೋಂದಾ ಗ್ರಾಪಂ ಅಧ್ಯಕ್ಷ ರಾಮಚಂದ್ರ ಹೆಗಡೆ ಭಾಗವಹಿಸುವರು. ಹಂಪಿ ವಿಶ್ವ ವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಮರೇಶ ಯತಗಲ್ ಸಮಾರೋಪ ಭಾಷಣ ಮಾಡುವರು. ಮೈಸೂರಿನ ಖ್ಯಾತ ಇತಿಹಾಸ ತಜ್ಞೆ ಡಾ. ವಸುಂಧರಾ ಫಿಲಿಯೋಜ ಎಲ್ಲ ಕಾರ್ಯಕ್ರಮಗಳ ಸರ್ವಾಧ್ಯಕ್ಷತೆ ವಹಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net