

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದ್ದ ವೃದ್ದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧೆಯ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಣಕಲ್ ಅಂಬಿಕಾನಗರದಲ್ಲಿ ನಿಂಗವ್ವ ಮಲ್ಲಪ್ಪ ಮುಳಗುಂದ (75) ಎಂಬ ವೃದ್ಧೆಗೆ ಪುತ್ರ ಅಶೋಕ ಮುಳಗುಂದ ಕಟ್ಟಿಗೆ ಮಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತೈಗೈದಿದ್ದಾನೆ. ಬಂಗಾರ ಹಾಗೂ ಆಸ್ತಿ ಕಲಹ ವಿಚಾರವಾಗಿ ಈ ಕೃತ್ಯ ಎಸೆಗಿದ್ದಾನೆಂಬುದು ಬೆಳಕಿಗೆ ಬಂದಿದೆ ಎಂದರು.
ಗುರುವಾರ ಬೆಳಗ್ಗೆ ಆರೋಪಿ ಅಶೋಕನನ್ನು ಹುಬ್ಬಳ್ಳಿಯ ಗಾಮನಗಟ್ಟಿ ರಸ್ತೆಯ ಗಣೇಶ ಕಾಲನಿಯಲ್ಲಿ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದರು.
ಗ್ಯಾಂಗ್ ಬಂಧನ: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಕರ್ತರ ಹೆಸರಿನಲ್ಲಿ ಸುಲಿಗೆ ಮಾಡಿದ್ದ ಗ್ಯಾಂಗ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಗೋಕುಲ ರಸ್ತೆಯಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇಲ್ಸ್ ಹೆಡ್ ಮತ್ತು ಮ್ಯಾನೇಜರ್‌ಗಳಿಗೆ ಗದಗದ ಮೂಲದ ಮಂಜುನಾಥ ಹದ್ದಣ್ಣನವರ ಎಂಬಾತ ಸೊಸೈಟಿಯ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆಯೊಡ್ಡುತ್ತಿದ್ದ. 1.5 ಕೋಟಿ ರೂ. ಬೇಡಿಕೆ ಇಟ್ಟಿದ್ದರ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಂಜುನಾಥ ಹದ್ದಣ್ಣವರ, ಮುಂಡಗೋಡ ಮೂಲದ ವೀರೇಶಕುಮಾರ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ, ಶಿವಪ್ಪ ಬೊಮ್ಮನಹಳ್ಳಿಯನ್ನು ಬಂಧಿಸಲಾಗಿದೆ ಎಂದರು.
ಬಂಧಿತರಿಂದ 1.70 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರೆಲ್ಲರೂ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು ಅಡ್ವಾನ್ಸ್ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನೂ ನಾಲ್ವರು ಆರೋಪಿಗಳ ಶಾಮೀಲಾಗಿರುವ ಶಂಕೆ ಇದ್ದು, ಬಂಧನಕ್ಕೆ ನಮ್ಮ ಪೊಲೀಸ್ ತಂಡ ಸಿದ್ಧವಾಗಿದೆ ಎಂದರು.