

ಕಾಸರಗೋಡು: ಕಟ್ಟಿಗೆಯಿಂದ ತಲೆಗೆ ಬಡಿದು ತಂದೆಯನ್ನು ಕೊಲೆಗೈದ ಪ್ರಕರಣದ ಅಪರಾಧಿ ಚಿತ್ತಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋ ಅದಿರಾಂಬು ಕಾಲನಿ ನಿವಾಸಿ ಅನೀಶ್(36) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ಎ.ಮನೋಜ್ 8 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ. 2019 ಜೂ.28ರಂದು ಅನೀಶ್ ತನ್ನ ತಂದೆ ದಾಮೋದರನ್(59) ಅವರನ್ನು ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಕೊಲೆಗೂ ಮೊದಲು ಅನೀಶ್ ಮದ್ಯದೊಂದಿಗೆ ಮನೆಗೆ ಆಗಮಿಸಿದ್ದು ತಂದೆ ಮತ್ತು ಪುತ್ರ ಇಬ್ಬರೂ ಮದ್ಯ ಸೇವಿಸಿದ್ದರೆನ್ನಲಾಗಿದೆ. ಮದ್ಯದ ನಶೆಯಲ್ಲಿ ದಾಮೋದರನ್ ಅವರ ಪತ್ನಿಯನ್ನು ಚಾಕುವಿನಿಂದ ಇರಿಯಲು ಮುಂದಾಗಿದ್ದರು. ತಾಯಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅನೀಶ್ ಹೊರಗಿಂದ ಕಟ್ಟಿಗೆ ತಂದು ತಂದೆಯ ತಲೆಗೆ ಬಡಿದಿದ್ದು, ಇದರಿಂದ ದಾಮೋದರನ್ ಪ್ರಾಣ ಬಿಟ್ಟಿರುವ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.