ಕರ್ನಾಟಕ ಸಿಎಂ ರೇಸ್​ನಲ್ಲಿ ಮಗನ ಹೆಸರು; ತಂದೆಗೆ ಅದಾಗಲೇ ಖುಷಿ!

Vidhan Soudha 17 May 20
Published on

ಧಾರವಾಡ: ಬಿ.ಎಸ್​. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದು ದಿನ ಕಳೆದರೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಷಯ ಇನ್ನೂ ಗುಟ್ಟಾಗಿಯೇ ಉಳಿದಿದೆ. ಈ ಮಧ್ಯೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುರಿತಂತೆ ಮಾಧ್ಯಮಗಳಲ್ಲಿ ಕೆಲವರ ಹೆಸರು ಕೇಳಿ ಬರುತ್ತಿದ್ದು, ಆಡಳಿತ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಕುರಿತು ಕುತೂಹಲ ಕೆರಳಿದೆ.

ಸಿಎಂ ರೇಸ್​ನಲ್ಲಿರುವವರ ಪೈಕಿ ಶಾಸಕ ಅರವಿಂದ ಬೆಲ್ಲದ ಅವರ ಹೆಸರು ಕೂಡ ಮಾಧ್ಯಮಗಳಲ್ಲಿ ಕೇಳಿಬಂದಿದ್ದನ್ನು ನೋಡಿ ಅವರ ತಂದೆ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸಂತಸ ಪಟ್ಟಿದ್ದಾರೆ. ಧಾರಾವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಇವರು, ಕೇಂದ್ರದ ಬಿಜೆಪಿ ನಾಯಕರು ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ನನಗೆ ಬಹಳ ಗೌರವ ಇದೆ. ಅವರು ಮಾಡುತ್ತಿರುವ ಕೆಲಸ ಎಲ್ಲ ರಾಜ್ಯದ ಜನರು ಮೆಚ್ಚಿದ್ದಾರೆ ಎಂದು ತಿಳಿಸಿದರು.

ಅರವಿಂದ ಬೆಲ್ಲದ ಸಿಎಂ ಆಗುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ನೋಡುತ್ತಿದ್ದೇನೆ. ಒಳಗಿನ ವಿಷಯ ನಾನು ತಿಳಿದುಕೊಳ್ಳಲು ಹೋಗಿಲ್ಲ, ನಾಲ್ಕು ದಿನಗಳಿಂದ ಇಡೀ ರಾಜ್ಯದಿಂದ ಕರೆಗಳು ಬರುತ್ತಿವೆ. ನಾನು ಅರವಿಂದ ತಾಯಿ ಟಿವಿಯಲ್ಲಿ ನೋಡುತ್ತಿದ್ದೇವೆ. ಅರವಿಂದನ ಅಭಿಮಾನಿಗಳಿಂದೂ ಕರೆಗಳು ಬರುತ್ತಿವೆ. ಇಂದು ಮೀಟಿಂಗ್ ಮುಗಿದ ಮೇಲೆ ನಿರ್ಣಯ ಆಗುತ್ತದೆ. ತಂದೆಯಾದ ನನಗೆ ಸಂತೋಷ ಆಗಿದೆ. ಜನರಿಗೆ ಸಂತೋಷ ಆಗಿದೆ ಎಂದರೆ ತಂದೆಯಾದ ನನಗೂ ಖುಷಿ ಆಗಿರುತ್ತದೆ ಎಂದು ಚಂದ್ರಕಾಂತ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net