ತಾಯಿ ಮೇಲೆ ಹಲ್ಲೆ ಮಾಡಿ ಜಗಳಕ್ಕೆ ಬಂದಿದ್ದಕ್ಕೆ ತಂದೆಯನ್ನೇ ಬರ್ಬರವಾಗಿ ಕೊಂದ ಮಗ!

Murder
ಆರೋಪಿ ಸಂತೋಷ್
Published on

ಬೆಳಗಾವಿ: ತಂದೆಯಿಂದ ಹಲ್ಲೆಗೊಳಗಾದ ತಾಯಿಯ ಚಿಕಿತ್ಸೆಗೆ ಮುಂದಾದ ಮಗನೊಂದಿಗೆ ಜಗಳ ತೆಗೆದ ತಂದೆಯನ್ನೇ ಮಗನು ಮಚ್ಚಿನಿಂದ ಕೊಲೆ ಮಾಡಿದ ಘಟನೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯಮಾರ್ಗದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಬೆಂಗಳೂರಿನ ಬಿಎಂಟಿಸಿ ಚಾಲಕನಾಗಿದ್ದ ರುದ್ರಪ್ಪ ತಳವಾರ (55) ಹಾಗೂ ಪತ್ನಿ, ಮಲ್ಲೂರ ಗ್ರಾಮದ ಖಾಸಗಿ ಶಾಲೆ ಶಿಕ್ಷಕಿ ಮಹಾದೇವಿ (50) ಮಧ್ಯೆ ಜಗಳ ನಡೆದು ಮಹಾದೇವಿಗೆ ಬಲವಾಗಿ ಹೊಡೆದಿದ್ದರಿಂದ ಕಣ್ಣಿನ ಭಾಗದಲ್ಲಿ ಬಲವಾದ ಗಾಯವಾಗಿತ್ತು. ಮಗ ಸಂತೋಷ ಇಬ್ಬರ ಜಗಳ ಬಿಡಿಸಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ.

ತನ್ನ ಬಳಿಯ ಹಣದಲ್ಲಿ ಔಷಧೋಪಚಾರ ಮಾಡಿಸಿ, ಸ್ಕ್ಯಾನಿಂಗ್​ಗಾಗಿ ಮನೆಗೆ ಹಣ ತರಲು ಬಂದಾಗ, ಕುಡಿದ ಅಮಲಿನಲ್ಲಿದ್ದ ತಂದೆ ಅವಳಿಗೆ ಚಿಕಿತ್ಸೆ ಕೊಡಿಸಬೇಡ ಎಂದು ಜಗಳವಾಡಿದಾಗ, ಮಾತಿಗೆ ಮಾತು ಬೆಳೆದು ಇಬ್ಬರು ಕೈ, ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಸಂತೋಷ ಸಿಟ್ಟಿನ ಭರದಲ್ಲಿ ಮಚ್ಚಿನಿಂದ ತಂದೆ ರುದ್ರಪ್ಪನ ಕುತ್ತಿಗೆ, ಕಣ್ಣಿಗೆ ಏಟು ಹಾಕಿದ್ದರಿಂದ ಸ್ಥಳದಲ್ಲೇ ರುದ್ರಪ್ಪ ಮೃತಪಟ್ಟಿದ್ದಾನೆ. ಆರೋಪಿ ಸಂತೋಷನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಡಿವೈಎಸ್​​ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net