

ಚಿತ್ತಾಪುರ: ಮಗ ತನ್ನ ತಾಯಿಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ರಾಜೋಳ್ಳದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ರಾಜೋಳ್ಳ ಗ್ರಾಮದ ದೇವಕಮ್ಮ ಪೂಜಾರಿ (೬೫) ಕೊಲೆಯಾದ ಮಹಿಳೆ. ಆಕೆಯ ಮಗ ಜೆಟ್ಟೆಪ್ಪ ಪೂಜಾರಿ ಕೊಲೆ ಮಾಡಿದ ಆರೋಪಿ.
ಜೆಟ್ಟೆಪ್ಪ ತನ್ನ ಪತ್ನಿ ಮಾಲಾಶ್ರೀಗೆ ಹೊಡೆಬಡೆ ಮಾಡುತ್ತಿದ್ದರಿಂದ ನಾಲ್ಕೈದು ವರ್ಷದ ಹಿಂದೆ ತವರು ಮನೆಯಾದ ಹಂದರಕಿಗೆ ಹೋಗಿದ್ದಳು. ತಾಯಿ ದೇವಕಮ್ಮನ ಜತೆ ಜೆಟ್ಟಪ್ಪ ವಾಸವಾಗಿದ್ದ. ಎರಡು ದಿನಗಳ ಹಿಂದೆ ದೇವಕಮ್ಮಳು ಪುತ್ರಿಯ ಊರು ಲಕ್ಷ್ಮೀಪುರವಾಡಿಗೆ ಹೋಗಿ, ಶುಕ್ರವಾರ ವಾಪಸ್ ಬಂದಿದ್ದಳು. ಇದಕ್ಕೆ ಆಕ್ಷೇಪಿಸಿದ ಜೆಟ್ಟೆಪ್ಪ ಮೂರು ದಿನ ಊರಿಗೆ ಹೋದರೆ ಊಟ ಹೇಗೆ ಮಾಡುವುದು, ಸರಿಯಾಗಿ ಊಟ ನೀಡುತ್ತಿಲ್ಲ ಎಂದು ತಾಯಿಗೆ ಬಡಿಗೆಯಿಂದ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಚಂದ್ರಾಮಪ್ಪ, ಸಿಬ್ಬಂದಿ ಚಂದ್ರಶೇಖರ, ದತ್ತಾತ್ರೇಯ, ನವಿಕುಮಾರ, ಬಸವರಾಜ, ಮಂಜುನಾಥ, ಈರೇಶ ರವರನ್ನು ಒಳಗೊಂಡ ತಂಡವನ್ನು ರಚಿಸಿ ಸದರಿ ಪ್ರಕರಣದ ಆರೋಪಿ ಜಟ್ಟೆಪ್ಪ ತಂದೆ ದೊಡ್ಡಬೀರಪ್ಪ ಪೂಜಾರಿ ರಾಜೋಳ ಪ್ರಕರಣ ದಾಖಲಾದ ೬ ಗಂಟೆಯ ಒಳಗಾಗಿ ಬಂಧಿಸಿ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ. ಸದರಿ ಪ್ರಕರಣ ದಾಖಲಾದ ೬ ಗಂಟೆಯ ಒಳಗಾಗಿ ಆರೋಪಿ ಪತ್ತೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಮೇಲಾಧಿಕಾರಿಯವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.