ಜನ್ಮಕೊಟ್ಟ ತಾಯಿಯ ಪೊದೆಯೊಳಗೆ ಬಿಟ್ಟುಹೋದ ಪುತ್ರ...!!

Ajji Lead
Published on

ಗಾಯಗೊಂಡು ಅಸಹಾಯಕ ಸ್ಥಿಯಲ್ಲಿದ್ದ ವೃದ್ಧೆ

ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಿತ್ಯಾನಂದ ಒಳಕಾಡು

ವಿಜಯವಾಣಿ ಸುದ್ದಿಜಾಲ ಉಡುಪಿ

ಜನ್ಮಕೊಟ್ಟ ತಾಯಿಯನ್ನೇ ಪುತ್ರನೋರ್ವ ಮನೆಯಿಂದ ಎಳೆದು ತಂದು ಗಿಡ-ಗಂಟಿಗಳು ಆವರಿಸಿಕೊಂಡಿದ್ದ ಬೃಹತ್​ ಪೊದೆಯೊಳಗೆ ಬಿಟ್ಟುಹೋದ ಅಮಾನವೀಯ ಘಟನೆ ಉಡುಪಿಯಲ್ಲಿ ಸಂಭವಿಸಿದೆ.

ಇಂದ್ರಾಳಿ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ವೃದ್ಧಳಾದ ತಾಯಿಯನ್ನು ಪುತ್ರನೇ ಪೊದೆಯೊಳಗೆ ನೂಕಿ, ಪರಾರಿಯಾಗಿದ್ದಾನೆ. ಸೋಮವಾರ (ಅ.13) ಬೆಳಗ್ಗೆ ರೈಲು ಹಳಿಗಳ ತಪಾಸಣೆಗೆ ಸಾಗುತ್ತಿದ್ದ ಗಸ್ತು ಸಿಬ್ಬಂದಿಗೆ ಪೊದೆಯೊಳಗೆ ವೃದ್ಧೆ ಇರುವುದು ಕಂಡು ಬಂದಿದೆ. ಕೂಡಲೇ ಅವರು ರೈಲ್ವೆ ಆರ್​ಪಿಎಫ್​ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವೃದ್ಧೆಯ ರಕ್ಷಣೆ

Ajji 2
ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧೆಯ ರಕ್ಷಣೆಗಾಗಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಆಂಬುಲೆನ್ಸ್​ನೊಂದಿಗೆ ಸ್ಥಳಕ್ಕಾಗಮಿಸಿದ ಅವರು, ಪೊದೆಯಲ್ಲಿದ್ದ ವೃದ್ಧೆಯನ್ನು ಹೊರ ತಂದು ವಿಚಾರಿಸಿದರು. ಭಯದಿಂದ ನಡುಗುತ್ತಿದ್ದ ಮಹಿಳೆ, ತನ್ನ ಹೆಸರು ವಸಂತಿಬಾಯಿ (70), ಮೂಡುಸಗ್ರಿ ಗದ್ದುಗೆ ಬಳಿ ನಮ್ಮ ಮನೆ ಇದೆ ಎಂದು ತಿಳಿಸಿದ್ದು, ಮಗ ಸುರೇಶ ಎಂಬಾತ ತನ್ನನ್ನು ಇಲ್ಲಿ ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿದ್ದಾಳೆ. ಅವಳಿಗೆ ಕುಡಿಯಲು ನೀರು ಕೊಟ್ಟು ಉಪಚರಿಸಿದ ಬಳಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿ, ನಿತ್ಯಾನಂದ ಒಳಕಾಡು ಸಹಕರಿಸಿದರು.

ವೃದ್ಧೆಯ ಎಡಗೈ ಮುಂಭಾಗದಲ್ಲಿ ಕತ್ತರಿಸಿದ ರೀತಿಯಲ್ಲಿ ಗಾಯವಾಗಿದ್ದು, ಪುತ್ರ ಹಲ್ಲೆ ನಡೆಸಿದ್ದಾನೆಯೋ ಅಥವಾ ಬಿದ್ದು ಗಾಯಗೊಂಡಿದ್ದಾಳೋ ಎಂದು ತಿಳಿದು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net