

ಚಿಕ್ಕಬಳ್ಳಾಪುರ: ಕುಡಿತದ ನಶೆಯಲ್ಲಿ ಹೆತ್ತ ತಾಯಿಯನ್ನು ಸ್ವಂತ ಮಗನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿಯ ರಾಮಾಂಜಿನಮ್ಮ ಮೃತ ದುರ್ದೈವಿ(50 ವರ್ಷ). ಕೊಲೆ ಮಾಡಿದ ಆರೋಪಿ ಚಂದ್ರಶೇಖರ್ (32). ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ವೃತ್ತ ನಿರೀಕ್ಷಕ ಸತ್ಯನಾರಾಯಣ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿ ಗ್ರಾಮದ ಸಮೀಪದ ಬೆಟ್ಟದಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
*ಪ್ರಕರಣದ ಹಿನ್ನೆಲೆ*
ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿಯ ಚಿಕ್ಕಹೊಸಹಳ್ಳಿಯ ಕೂಲಿ ಕಾರ್ಮಿಕ ಮಹಿಳೆ ರಾಮಾಂಜಿನಮ್ಮ ಮದ್ಯ ವಸನಿ. ಜತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದರ ಬಗ್ಗೆ ಮಗ ಚಂದ್ರಶೇಖರ್ ಆಗಾಗ ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಮಾಡುತ್ತಿದ್ದ. ಮೊದಲೇ ಮದುವೆಯಾಗಿದ್ದ ಆತ ಬೇರೆ ಮನೆಯಲ್ಲಿ ಹೆಂಡತಿಯೊಂದಿಗೆ ವಾಸವಿದ್ದ. ಕುಡಿತದ ನಶೆಯಲ್ಲಿ ಮಂಗಳವಾರ ರಾತ್ರಿ ತಾಯಿ ಮತ್ತು ಮಗ ನಡುವೆ ಮತ್ತೆ ಗಲಾಟೆಯಾಗಿದೆ. ಇದೇ ವೇಳೆ ಕಲ್ಲು ತೆಗೆದುಕೊಂಡು ಚಂದ್ರಶೇಖರ್ ಹೊಡೆದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಮಾಂಜಿನಮ್ಮ ಮೃತಪಟ್ಟಿದ್ದಾರೆ.