

ಸೋಮವಾರಪೇಟೆ: ಕೇರಳದಲ್ಲಿ ಜಾತಿ ಪೂರ್ವಾಗ್ರಹಗಳಿಂದ ತುಳಿತಕ್ಕೊಳಗಾಗಿದ್ದ ಜನರ ಸಬಲೀಕರಣಕ್ಕೆ ಶ್ರಮಿಸಿದ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಯುವ ಸಮುದಾಯ ಪಾಲಿಸಬೇಕು. ತಮ್ಮ ಹಕ್ಕು ಪಡೆಯಲು ಸಂಘಟಿತರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರಪೇಟೆ ತಾಲೂಕು ಹಿಂದು ಮಲಯಾಳ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಓಣಂ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾರಾಯಣ ಗುರುಗಳು ಒಂದು ಜಾತಿಗೆ ಧರ್ಮಕ್ಕೆ ಸೀಮಿತವಾಗಿಲ್ಲ. ತುಳಿತಕ್ಕೊಳಗಾದವರ ಪರವಾಗಿ ಹೋರಾಟ ಮಾಡಿದ್ದರು. ವಿದ್ಯೆ ಕಲಿತು ಸ್ವತಂತ್ರರಾಗಿ ಎಂದು ಸಂದೇಶ ಸಾರಿದ್ದರು. ಕೇರಳ ರಾಜ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಸ್ತುತ ಸಾಧನೆ ಮಾಡಿದ್ದರೆ ಅದರ ಶ್ರೇಯ ನಾರಾಯಣ ಗುರುಗಳಿಗೆ ಸಲ್ಲಬೇಕು. ಅವರ ತತ್ವ-ಸಿದ್ಧಾಂತಗಳು ಮನೆ ಮನೆಗೆ ತಲುಪಬೇಕು ಎಂದರು.
ಮಲಯಾಳಿ ಸಂಘದವರ ಬಿಸಿಎಂ ಹಾಸ್ಟೆಲ್, ಸಮುದಾಯ ಭವನದ ಬೇಡಿಕೆ ಈಡೇರಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ಕೊಡಗಿನಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಇದುವರೆಗೂ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ತಮ್ಮ ಖಾತೆ ವ್ಯಾಪ್ತಿಗೆ ರಾಜ್ಯದಲ್ಲಿ 76 ಸಾವಿರ ಶಾಲೆಗಳು ಬರುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಮುಂದಿನ ಒಂದು ವರ್ಷದಲ್ಲಿ 600 ಕನ್ನಡ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಕನ್ನಡ, ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ 6 ಸಾವಿರ ಶಾಲೆಗಳನ್ನು ಪ್ರಾರಂಭಿಸುವ ಗುರಿ ಇದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ವಿ.ಎಂ.ವಿಜಯ, ಚೌಡ್ಲು ಗ್ರಾಪಂ ಅಧ್ಯಕ್ಷೆ ಗೀತಾ ಶಶಿಕುಮಾರ್, ಓಣಂ ಉತ್ಸವ ಸಮಿತಿ ಅಧ್ಯಕ್ಷ ಪಿ.ಡಿ.ಪ್ರಕಾಸ್, ಸೋಲೂರು ಆರ್ಯ, ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೇರಳ ಕಾಞಂಗಾಡ್ ಗೃಹಸ್ಥಾಶ್ರಮದ ಶ್ರೀ ಗಂಗಾಜೀನಾಯರ್, ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಸಂಘದ ಹಿರಿಯ ಸಲಹೆಗಾರ ಟಿ.ಕೆ.ಸಾಯಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮುರಳಿ, ಸಮುದಾಯದ ಹಿರಿಯರು, ಗಣ್ಯರು ಇದ್ದರು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಸಾಧಕರಿಗೆ ಸನ್ಮಾನ ಮಾಡಲಾಯಿತು. ಪೂಕಳಂ ಸ್ಪರ್ಧೆ, ನೃತ್ಯ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಚಿತ್ರ:1ಎಸ್‌ಪಿಟಿ1-ಸೋಮವಾರಪೇಟೆ ಆಯೋಜಿಸಿದ್ದ ಓಣಂ ಉತ್ಸವ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಗಂಗಾಜೀನಾಯರ್, ವಿಜಯ, ಮಂತರ್ ಗೌಡ, ಪೊನ್ನಣ್ಣ ಇದ್ದರು.
1ಎಸ್‌ಪಿಟಿ2- ಸೋಮವಾರಪೇಟೆ ಹಿಂದೂ ಮಲಯಾಳ ಸಮಾಜದ ವತಿಯಿಂದ ಓಣಂ ಉತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಸಿಂಗಾರಿ ಮೇಳದೊಂದಿಗೆ ಉತ್ಸವದ ಮೆರವಣಿಗೆ ನಡೆಯಿತು.
=-=-=-=-=-=-=-=-=-=-=-=-=-=-=-=-=-=-=-=-