

ಸೋಮವಾರಪೇಟೆ: ಪ್ರವಾದಿ ಮಹಮ್ಮದ್‌ರ ಸಂದೇಶ ಮತ್ತು ಆದರ್ಶಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಪಟ್ಟಣದ ಜಲಾಲಿಯ ಮಸೀದಿಯಲ್ಲಿ ಈದ್‌ಮಿಲಾದ್ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಯುವಕರು ದೇಶದ ಸಂಪತ್ತು. ದುಶ್ಚಟದಿಂದ ಮುಕ್ತರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಯುವಕರು ದಾರಿ ತಪ್ಪಿದಾಗ ಧರ್ಮಗುರುಗಳು ಅವರನ್ನು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮನಃಪರಿವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಅಸೆ ಬಿಡಬೇಕು, ದ್ವೇಷ ತ್ಯಜಿಸಬೇಕು, ಮಾನವರನ್ನು ಪ್ರೀತಿಸಬೇಕು. ಇವುಗಳು ಧರ್ಮಗ್ರಂಥಗಳ ಸಂದೇಶವಾಗಿದೆ. ಪ್ರತಿಯೊಬ್ಬರೂ ಧರ್ಮಗ್ರಂಥಗಳಲ್ಲಿನ ಅಂತಃಸತ್ವ ಅರಿತುಕೊಂಡರೆ ಉತ್ತಮ ಪ್ರಜೆಯಾಗಬಹುದು. ಮನುಷ್ಯನಲ್ಲಿ ಆಂತರಿಕ ಬದಲಾವಣೆಗೆ ಸೌಹಾದರ್ ಸಭೆಗಳ ಅವಶ್ಯಕತೆ ಇದೆ ಎಂದರು.
ಜಲಾಲಿಯ ಮಸೀದಿಯ ಮಾಜಿ ಖತೀಬರಾದ ಅಬೂಬಕರ್ ಸಿದ್ದೀಕಿ ಮೊಂಟುಗೋಳಿ ಮಾತನಾಡಿ, ವಿಜ್ಞಾನ ಬೆಳೆದಂತೆ ಚಂದ್ರನ ಮೇಲೆ ಬದುಕುವುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಆದರೆ ಭಾರತದೊಳಗೆ ಬದುಕುವುದಕ್ಕೆ ಪರದಾಡುವ ಪರಿಸ್ಥಿತಿ ಇದೆ. ಎಲ್ಲರನ್ನೂ ಪ್ರೀತಿಸಿ, ಯಾರನ್ನೂ ನೋಯಿಸಬೇಡಿ ಎಂಬುದು ಪ್ರವಾದಿ ಮಹಮ್ಮದ್‌ರ ಸಂದೇಶವಾಗಿದೆ. ಎಲ್ಲ ಧರ್ಮದ ಆರಾಧ್ಯ ವಸ್ತುಗಳನ್ನು ಗೇಲಿ ಮಾಡಿದರೆ ಅವನು ಮನುಷ್ಯನಾಗಲು ಸಾಧ್ಯವೇ ಇಲ್ಲ. ದೇವರ ಮೇಲೆ ಭಯ, ಭಕ್ತಿ ಇದ್ದರೆ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಮಸೀದಿ ಅಧ್ಯಕ್ಷ ಎಂ.ಬಿ.ಇಬ್ರಾಹಿಂ, ಖತೀಬರಾದ ಅಬ್ದುಲ್ ಹಮೀದ್ ಸಖಾಫಿ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಮಹಮ್ಮದ್, ಮಾಜಿ ಅಧ್ಯಕ್ಷರಾದ ಆದಂ ಹಾಜಿ, ಅಶ್ರಪ್, ಪ್ರಮುಖರಾದ ಸಿ.ಬಿ.ಸುರೇಶ್, ಚೇತನ್, ಮುನೀರ್ ಸಹದಿ, ಮಹಮ್ಮದ್‌ಲಿ, ಎನ್.ಎ,ಮೂಸ ಹಾಜಿ, ಅಬ್ದುಲ್ ರೆಹಮಾನ್ ಇದ್ದರು.