ಜನರಿಗೆ ಪ್ರವಾದಿ ಸಂದೇಶ ತಲುಪಿಸುವ ಕಾರ್ಯ

28SPT4
Published on

ಸೋಮವಾರಪೇಟೆ: ಸಮೀಪದ ಬಜೆಗುಂಡಿ ಗ್ರಾಮದ ಖಿಳಾರಿಯ ಮಸೀದಿಯಲ್ಲಿ ಪ್ರವಾದಿ ಮಹಮ್ಮದ್ ಅವರ ಜನ್ಮದಿನ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಸಮಾಜದಲ್ಲಿ ಅಧರ್ಮ, ಅನ್ಯಾಯ, ತಾಂಡವವಾಡುತ್ತಿದ್ದ ಕಾಲದಲ್ಲಿ ಮಹಮ್ಮದರು ಅಲ್ಲಾಹನ ಸಂದೇಶವಾಹಕರಾಗಿ, ಇಸ್ಲಾಮ್ ಎಂಬ ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿದರು. ಹೀಗಾಗಿ ಈದ್‌ಮಿಲಾದ್ ಹೆಸರಿನಲ್ಲಿ ಪ್ರವಾದಿ ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಆಧುನಿಕ ಜಗತ್ತು ಕೂಡ ಮೇಲು-ಕೀಳು ಎಂಬ ವರ್ಗೀಯ, ಜನಾಂಗೀಯ ಅಸಮಾನತೆ, ಲಿಂಗ ತಾರತಮ್ಯಗಳ ಮೂಲಕ ಎದುರಾಳಿ ಸಮಾಜದ ಮೇಲೆ ಶೋಷಣೆ ಮಾಡುತ್ತಿದೆ. ಅದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಕ್ರಿ.ಶ. ಆರನೇ ಶತಮಾನದಲ್ಲೇ ಇಂತಹ ಎಲ್ಲ ರೀತಿಯ ಅಸಮಾನತೆಗಳನ್ನು ತೊಡೆದು ಹಾಕಿ ಶೋಷಣೆ ಮುಕ್ತ ಸಮಾಜ ನಿರ್ಮಿಸುವ ಮೂಲಕ ಪ್ರವಾದಿ ಮಹಮ್ಮದ್ ಅವರು ಗಮನ ಸೆಳೆದಿದ್ದರು. ಅವರ ಆದರ್ಶಗಳನ್ನು ಇಂದಿನ ಯುವ ಸಮೂಹ ಅಳವಡಿಸಿಕೊಳ್ಳಬೇಕಿದೆ ಎಂದರು.

ಮಸೀದಿಯ ಆಡಳಿತ ಮಂಡಳಿಯ ಸ್ಥಾಪಕ ಅಧ್ಯಕ್ಷ ಹಾಗೂ ಹಾಲಿ ಗೌರವ ಅಧ್ಯಕ್ಷ ಅಬ್ದುಲ್ ಖಾದರ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ವೇದಿಕೆಯಲ್ಲಿ ಧರ್ಮಗುರು ಉಬೈದ್ ಫೈಜಿ, ಆಡಳಿತ ಮಂಡಳಿ ಉಪಾಧ್ಯಕ್ಷ ಅನೀಫ್, ಕಾರ್ಯದರ್ಶಿ ಸುಲೈಮನ್, ಸಹ ಕಾರ್ಯದರ್ಶಿ ನಿಯಾಜ್, ಪದಾಧಿಕಾರಿಗಳಾದ ಮುಸ್ತಫ, ಮುನೀರ್, ಇಬ್ರಾಹಿಂ, ಅಬ್ದುಲ್ ರೆಹಮನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net