

ಸೋಮವಾರಪೇಟೆ: ಪಟ್ಟಣದಲ್ಲಿ ಪ್ರಗತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ನಮಗೆ ಹಸ್ತಾಂತರ ಮಾಡಬೇಕೆಂದು ದಲಿತ ಹಿತರಕ್ಷಣಾ ಒಕ್ಕೂಟ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು.
ಜಿಲ್ಲೆಯ ದಲಿತ ಹಿತರಕ್ಷಣಾ ಒಕ್ಕೂಟ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಮೀಪ 1.75 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಪ್ರಾರಂಭಿಸಿ ಹತ್ತು ವರ್ಷ ಕಳೆದಿದ್ದರೂ ಪೂರ್ಣಗೊಂಡಿಲ್ಲ. ಕುಡಿಯುವ ನೀರು, ಶೌಚಗೃಹ ಸೇರಿದಂತೆ ಹಲವು ಕೆಲಸಗಳು ಬಾಕಿ ಇದೆ. ಈ ಭವನವು ದಲಿತ ಸಮುದಾಯದ ಕಾರ್ಯಕ್ರಮಗಳಿಗೆ ಬೇಕಾಗಿದ್ದು, ತಕ್ಷಣವೇ ಉಳಿದ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡವನ್ನು ಹಸ್ತಾಂತರಿಸಬೇಕೆಂದು ತಹಸೀಲ್ದಾರ್ ನರಗುಂದ ಅವರಲ್ಲಿ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.
ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಗೌರವ ಅಧ್ಯಕ್ಷ ಜಯಪ್ಪ ಹಾನಗಲ್, ಉಪಾಧ್ಯಕ್ಷರಾದ ಎಚ್.ಎಂ.ಸೋಮಪ್ಪ, ಎಂ.ಪಿ.ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಈ.ಜಯೇಂದ್ರ, ಖಜಾಂಚಿ ಎಚ್.ಎ.ನಾಗರಾಜು, ಸಹ ಕಾರ್ಯದರ್ಶಿ ಮಂಜುನಾಥ್ ಇದ್ದರು.