

ಸೋಮವಾರಪೇಟೆ: ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಮತ್ತು 61ನೇ ಮಹಾರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಜಾತ್ರೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಕೂತಿ ನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ ಹೊರಜಿಲ್ಲೆಯ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್.ರಘುಕುಮಾರ್, ಖಜಾಂಚಿ ಡಿ.ಎಸ್.ಲಿಂಗರಾಜು, ಉಪಾಧ್ಯಕ್ಷ ಕೆ.ಟಿ.ಕೃಷ್ಣಪ್ಪ, ಧರ್ಮದರ್ಶಿ ಕೆ.ಎಸ್.ಚಂದ್ರಾವತಿ, ಸದಸ್ಯ ಎಸ್.ಎ.ಪ್ರತಾಪ್, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮತ್ತಿತರರು ಇದ್ದರು.
ಜಾತ್ರೋತ್ಸವ ಅಂಗವಾಗಿ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಾಂಬಾರ ಮಂಡಳಿ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ , ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪದೋತ್ಸವದ ಸುಗ್ಗಿ ಹುಗ್ಗಿ ಕಲಾತಂಡಗಳು ಜಾತ್ರೆಗೆ ಮೆರುಗು ತಂದುಕೊಟ್ಟವು. ಮಂಡ್ಯದ ನಂದಿ ಧ್ವಜ, ಮೈಸೂರಿನ ಪಟ ಕುಣಿತ, ಡೊಳ್ಳು ಕುಣಿತ, ನಂಜನಗೂಡಿನ ಹುಲಿವೇಷ, ರಾಮನಗರದ ಪೂಜಾ ಕುಣಿತ, ಪಿರಿಯಾಪಟ್ಟಣದ ಕಂಸಾಳೆ, ಬಂಟ್ವಾಳದ ಚಿಲಿ ಪಿಲಿ ಬಳಗದ ಗೊಂಬೆಯಾಟ, ಕೀಲುಕುದುರೆ, ಚಿಕ್ಕಮಗಳೂರಿನ ಚಿಟ್ಟಿಮಾಳ, ಹಾವೇರಿಯ ಪುರವಂತಿಕೆ, ಕಡೂರಿನ ಸೋಮನ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಪಾಲ್ಗೊಂಡಿದ್ದವು.
ಕಳೆದ 13ರಂದು ಸಂಜೆ 6.30ಕ್ಕೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. 14ರಂದು ಮಕರ ಸಂಕ್ರಮಣ ಕರುವಿನ ಹಬ್ಬ ಜರುಗಿದರೆ, 15ರಂದು ಅರಸು ಬಲ ಸೇವೆ ನಡೆದಿದ್ದವು. 17ರಂದು ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಭಾಗವಹಿಸಲಿದ್ದಾರೆ.