ನಾಡಕಚೇರಿ ಅವರಣದಲ್ಲಿ ಅವ್ಯವಸ್ಥೆ

dpt 2 nadacheri crmndi bblok
ನಾಡಕಚೇರಿ ಅವರಣದಲ್ಲಿ ಅವ್ಯವಸ್ಥೆ
Published on

ಚರಂಡಿ ಮುಚ್ಚಿದ ಪರಿಣಾಮ ಕೆಸರುಗದ್ದೆಯಾದ ರಸ್ತೆ

ಹೆದ್ದಾರಿಗೆ ಹರಿಯುತ್ತಿದೆ ಮಲಿನ ನೀರು


ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ನೆಲಮಂಗಲ ತಾಲೂಕು ಸೋಂಪುರ ನಾಡಕಚೇರಿ ಕಳೆದ ಸೋಮವಾರವಷ್ಟೆ ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಿದೆ ಆದರೆ ನಾಡಕಚೇರಿ ಆವರಣದ ನಿರ್ವಹಣೆ ಕೊರತೆಯಿಂದ ಕಚೇರಿಯ ಆವರಣ ಕೆಸರುಗದ್ದೆಯಂತಾಗಿದೆ.
ಮಳೆ ನೀರು ಹರಿದುಹೋಗಲು ನಿರ್ಮಾಣ ಮಾಡಿದ್ದ ಚರಂಡಿಯನ್ನು ಮಣ್ಣಿನಿಂದ ಮುಚ್ಚಿರುವುದೆ ಇದಕ್ಕೆ ಕಾರಣ ಎನ್ನಲಾಗಿದೆ. ಕಚೇರಿ ಉದ್ಘಾಟನೆ ಸಮಯಲ್ಲಿ ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಮಣ್ಣು ಹಾಕಲಾಗಿತ್ತು ಆದರೆ ಮಣ್ಣು ಸುರಿಯುವ ವೇಳೆ ಚರಂಡಿಯನ್ನೂ ಮುಚ್ಚಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಚರಂಡಿಗೆ ಮಣ್ಣು ಸುರಿದು ಸಮತಟ್ಟು ಮಾಡಿರುವುದರಿಂದ ಕಳೆದೆರಡುವ ದಿನದಿಂದ ಸುರಿಯುತ್ತಿರುವ ಮಳೆಗೆ ಇಡೀ ಆವರಣ ಕೆಸರು ಗದ್ದೆಯಂತಾಗಿದೆ ಅಲ್ಲದೆ ಹಿಂದಿನ ಚರಂಡಿಯ ಮಲಿನ ನೀರು ಹೆದ್ದಾರಿಗೆ ಹರಿಯುತ್ತಿದ್ದು ಸುತ್ತಮುತ್ತಲ ಆವರಣ ಗಬ್ಬು ವಾಸನೆ ಬೀರುವಂತಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮಲಿನ ನೀರಿನಲ್ಲೇ ಹಾದು ಹೋಗುವಂತಾಗಿದೆ. ವಾಹನ ಸವಾರರು ಮಲಿನ ನೀರು ತಪ್ಪಿಸಲು ಹೋಗಿ ಅಪಘಾತ ಮಾಡಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ.
ವರದಿ ಬಳಿಕ ತರಾತುರಿ ಉದ್ಘಾಟನೆ: ದಶಕಗಳ ಕಾಲ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸಿದ್ದ ಸೋಂಪುರ ನಾಡಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ಕಚೇರಿ ಸುತ್ತಮುತ್ತಲೂ ಗಿಡ-ಗಂಟಿ ಬೆಳೆದು ಅಕ್ರಮ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿತ್ತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಭೂತಬಂಗೆಯಂತಾಗಿರುವುದರ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು. ವರದಿ ಬಳಿಕ ಎಚ್ಚೆತ್ತ ಕಂದಾಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಿ ಕಚೇರಿ ಕಾರ್ಯಾರಂಭ ಮಾಡಿದ್ದರು. ಆದರೆ ಇದೇ ತರಾತುರಿ ಕಾರಣದಿಂದ ಈಗ ಕಚೇರಿ ಆವರಣ ಅವ್ಯವಸ್ಥೆಯ ತಾಣವಾಗಿ ರೂಪುಗೊಂಡಿದೆ.

ಸೋಂಪುರ ನಾಡಕಚೇರಿ ಉದ್ಘಾಟನೆ ವೇಳೆ ಆವರಣಲ್ಲಿ ಮಳೆ ನೀರು ನಿಲ್ಲದಂತೆ ಮಣ್ಣು ಹಾಸಿ ಸಮತಟ್ಟು ಮಾಡಲಾಗಿದೆ ಆದರೆ ಈ ವೇಳೆ ಚರಂಡಿಯನ್ನು ಗಮನಿಸಿದೇ ಚರಂಡಿಯನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ. ಈ ಕೂಡಲೇ ಸೋಂಪುರ ಪಂಚಾಯಿತಿಗೆ ಪತ್ರ ಬರೆದು ಚರಂಡಿಯಲ್ಲಿನ ಮಣ್ಣು ತೆರವುಗೊಳಿಸಿ ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಲಾಗುವುದು.
ಬಿ.ಸಿ.ಶಶಿಧರ್, ಉಪತಹಸೀಲ್ದಾರ್, ಸೋಂಪುರ ನಾಡಕಚೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net