

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಂಕ್ರಾಂತಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಬಸವಣ್ಣ ದೇವರ ಸೇವಾ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಕಡಲೆಕಾಯಿ ಪರಿಷೆಗೆ ಭರ್ಜರಿ ಸಿದ್ದತೆ ಆರಂಭವಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಸೋಂಪುರ (ನೈಸ್ ಕಾರಿಡಾರ್ ಪಕ್ಕ)ದಲ್ಲಿನ ಶ್ರೀ ಬಸವೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಜ.14 ಸಂಕ್ರಾಂತಿ ಹಬ್ಬದಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ನಿರಂತರ ಅನ್ನದಾಸೋಹ, ಉಚಿತ ಕಡಲೆಕಾಯಿ ಕಬ್ಬು ವಿತರಣೆ ಸೇರಿ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆಗೆ ಸಿದ್ದತೆ ಆರಂಭವಾಗಿದೆ.
ಗರ್ಭಿಣಿಯರಿಗೆ ಸೀಮಂತ: ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು ಈ ಬಾರಿ ಗರ್ಭಿಣಿಯರಿಗೆ ಮಡಿಲು ತುಂಬುವ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೇಯೇ ಕಾರ್ಯಕ್ರಮದಲ್ಲಿ ಲಾಟರಿ ಮೂಲಕ ಆಯ್ಕೆಯಾಗುವ ಐವರು ಅದೃಷ್ಟಶಾಲಿಗಳ ಹೆರಿಗೆಯ ಸಂಪೂರ್ಣ ಆರ್ಥಿಕ ಖರ್ಚುವೆಚ್ಚ ಭರಿಸಲಾಗುವುದು ಇದಕ್ಕಾಗಿ ಕೆಂಗೇರಿ ಉಪನಗರ ಸುಪ್ರ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಮೋರ್ಚಾ ಉಪಾಧ್ಯಕ್ಷ ಹಾಗೂ ಕಡಲೆಕಾಯಿ ಪರಿಷೆ ನೇತೃತ್ವ ವಹಿಸಿರುವ ಎಂ.ರುದ್ರೇಶ್ ತಿಳಿಸಿದ್ದಾರೆ. ಸುಮಾರು 15 ಗ್ರಾಮಗಳಿಂದ ಬರಲಿರುವ ಗರ್ಭಿಣಿಯರನ್ನು ಕರೆತರುವುದು ಹಾಗೆಯೇ ಕಾರ್ಯಕ್ರಮ ಮುಗಿದ ಬಳಿಕ ಸ್ವಸ್ಥಾನಕ್ಕೆ ಕಳುಹಿಸಿಕೊಡುವವರೆಗೆ ಸಂಪೂರ್ಣ ಜವಾಬ್ದಾರಿಯನ್ನು ಸಮಿತಿ ವಹಿಸಲಿದೆ. ಮುಂಜಾಗ್ರತಾಕ್ರಮವಾಗಿ 15 ಕ್ಕೂ ಹೆಚ್ಚು ವೈದ್ಯರು, ನರ್ಸ್‌ಗಳು 30ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗುವುದು, ಸುಮಾರು 500 ಗರ್ಭಿಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.12 ರ ಸಂಜೆವರೆಗೆ ಹೆಸರು ನೋಂದಾಯಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ, ಈಗಾಗಲೇ 480 ಗರ್ಭಿಣಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ಗರ್ಭಿಣಿಯರೊಂದಿಗೆ ಅವರ ಕುಟುಂಬದ ಓರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಂಪತಿ, ಸಂಸದ ಯದುವೀರ್ ಒಡೆಯರ್ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ದಂಪತಿ ಗರ್ಭಿಣಿಯರಿಗೆ ಮಡಿಲು ತುಂಬುವ ಶಾಸ ನೆರವೇರಿಸಿಕೊಡಲಿದ್ದಾರೆ ಎಂದು ರುದ್ರೇಶ್ ಮಾಹಿತಿ ನೀಡಿದರು.
18 ವರ್ಷದ ಹಿಂದೆ ಜೀರ್ಣೋದ್ಧಾರ: ಸುಮಾರು 18 ವರ್ಷದ ಹಿಂದೆ ಜೀರ್ಣೋದ್ಧಾರಗೊಂಡ ಶ್ರೀ ಬಸವೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಜಾತ್ರಾ ಮಹೋತ್ಸವ ನಿರಂತವಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ಉತ್ಸವ ನಡೆಸಲು ಸಕಲ ಸಿದ್ದತೆ ನಡೆಯುತ್ತಿದೆ ಎಂದು ಶ್ರೀ ಬಸವಣ್ಣ ದೇವರ ಸೇವಾ ಸಮಿತಿ ಮುಖಂಡ ಪರಮಶಿವಯ್ಯ ತಿಳಿಸಿದರು. ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ದತೆ ಬಗ್ಗೆ ಶನಿವಾರ ಸೋಂಪುರ ದೇಗುಲದ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರೈತರು ಬೆಳೆದಂತಹ ಹಣ್ಣು ತರಕಾರಿಗಳಿಂದ ದೇಗುಲವನ್ನು ಸಿಂಗರಿಸಲಾಗುತ್ತದೆ. ಪ್ರತಿ ವರ್ಷ ವಿಶೇಷ ವಿನ್ಯಾಸಗಳಿಂದ ಅಲಂಕರಿಸಲಾಗುತ್ತದೆ ಎಂದು ತಿಳಿಸಿದರು. ನಗರೀಕರಣದ ಭರದಲ್ಲಿ ಗ್ರಾಮೀಣ ಜಾತ್ರಾ ಮಹೋತ್ಸವ, ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಸೊಗಡಿನ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೂ ಪರಿಚಯಿಸುವ ದೃಷ್ಟಿಯಿಂದ ಕಡಲೆಕಾಯಿ ಪರಿಷೆಯನ್ನು ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಸ್ವಾಮೀಜಿಗಳ ಸಾನ್ನಿಧ್ಯ: ಸುತ್ತೂರು ಶ್ರೀ ಜಗದ್ಗುರು ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀರಂಗಪಟ್ಟಣದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಕನಕಪುರದ ಶ್ರೀ ಮುರಳೇಗವಿಮಠದ ಶ್ರೀ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ, ಕೆಂಗೇರಿ ಉಪನಗರ ಏಕದಳ ಬಿಲ್ವ ಬಂಡೇಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.
ಕಲ್ಯಾಣೋತ್ಸವ ಸಂಭ್ರಮ:
ಕಳೆದ ಬಾರಿ ಗಿರಿಜಾ ಕಲ್ಯಾಣೋತ್ಸವ ಯಶಸ್ವಿಯಾಗಿ ನೆರವೇರಿತ್ತು, ಈ ಬಾರಿ ಶ್ರೀ ಶೈಲ ಶ್ರೀ ಭ್ರಮರಾಂಭಿಕಾದೇವಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ತುಂಬು ಗರ್ಭಿಣಿಯರಿಗೆ ನಾವು ತೋರಿಸುವ ತವರು ಮನೆಯ ಪ್ರೀತಿ ಇದಾಗಿದೆ, ಸೀಮಂತ ಶಾಸ ಹೆಣ್ಣಿಗೆ ಅತ್ಯಂತ ಭಾವುಕವಾದ ಸಡಗರ ತುಂಬಿದ ಕ್ಷಣವಾಗಿದೆ. ಗರ್ಭದೊಳಗಿನ ಉಸಿರು ಭವಿಷ್ಯದಲ್ಲಿ ಹೆಸರುವಾಸಿಯಾಗಲಿ ಎಂಬ ಹಾರೈಕೆಯೊಂದಿಗೆ ಈ ಬಾರಿ ಗರ್ಭಿಣಿಯರಿಗೆ ಮಡಿಲು ತುಂಬು ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದಿನಂತೆ ಪ್ರತೀ ವರ್ಷ ನಡೆಯುವ ಕಡಲೆಕಾಯಿ ಪರಿಷೆ ಹಾಗೂ ರಥೋತ್ಸವ ಸಂಭ್ರಮಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗುವ ನಿರೀಕ್ಷೆಯಲ್ಲಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.
ಎಂ.ರುದ್ರೇಶ್, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ