

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ರೈತರು ಹಾಗೂ ಸಂಘ ಅಭಿವೃದ್ಧಿ ಹೊಂದಲಿದೆ ಎಂದು ಬರಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್.ಶಿವಣ್ಣ ಅಭಿಪ್ರಾಯಪಟ್ಟರು.
ಸೋಂಪುರ ಹೊಬಳಿಯ ಬರಗೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ 4.19 ಲಕ್ಷ ರೂ. ಲಾಭ ಬಂದಿದ್ದು. ಒಟ್ಟು 198 ಸದಸ್ಯರಿದ್ದಾರೆ. ಅದರಲ್ಲಿ 72 ರೈತರು ನಿತ್ಯ 950 ಲೀಟರ್ ಹಾಲು ಸರಬರಾಜು ಮಾಡುತ್ತಿದ್ದು, ಗುಣಮಟ್ಟದ ಹಾಲು ಸಂಗ್ರಹಣೆ ಆದ್ಯತೆ ನೀಡಲಾಗಿದೆ. ಕೇಂದ್ರದಲ್ಲಿ ಸುಮಾರು 15 ದಿನಕ್ಕೊಮ್ಮೆ ಹಾಲಿನ ಬಿಲ್ ನೀಡಲಾಗುತ್ತಿದೆ ಎಂದರು.
ಸಿಇಒ ಬಿ.ಎಚ್.ನಾಗೇಶ ಮಾತನಾಡಿ, ಗುಣಮಟ್ಟದ ಹಾಲು ಪೂರೈಕೆಗೆ ಬಮುಲ್‌ನಿಂದ ದೊರೆಯುವ ಸೌಲಭ್ಯಗಳೇ ಕಾರಣ. ಬಮುಲ್‌ನಿಂದ ಹಸುಗಳಿಗೆ ವಿಮಾ ಯೋಜನೆ, ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ರಾಸುಗಳಿಗೆ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ ಎಂದರು.
ನೆಲಮಂಗಲ ಶಿಬಿರದ ಸಹಾಯಕ ವ್ಯವಸ್ಥಾಪಕ ಡಾ.ಆದರ್ಶ, ವಿಸ್ತರಾಣಾಧಿಕಾರಿ ಚಲುವರಂಗಯ್ಯ, ಬರಗೇನಹಳ್ಳಿ ವ್ಯವಸಾಯ ಸೇವ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್.ಶಿವರಾಮಯ್ಯ, ಉಪಾಧ್ಯಕ್ಷ ರಂಗಸ್ವಾಮಯ್ಯ, ನಿರ್ದೇಶಕರಾದ ನಟರಾಜು, ಜಿ.ಉಮೇಶ, ಟಿ.ಗಂಗಯ್ಯ, ಮೋಹನಕುಮಾರ, ಭಾಗ್ಯಮ್ಮ, ದೋಡ್ಡಮ್ಮ, ಜಿ.ಮಮತಾ, ಹನುಮಕ್ಕ, ಚಿಕ್ಕೇಗೌಡ, ಹಾಲು ಪರೀಕ್ಷಕಿ ಮೇಹರುನ್ನಿಸಾ, ಸಹಾಯಕ ಬಿ.ಜಿ.ರವಿಕುಮಾರ ಇದ್ದರು.