ಜುಲೈನಲ್ಲಿ ಸೋಮನಾಥಪುರ ಉತ್ಸವ

somanathapura-vishnu
Published on

ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಪ್ರವಾಸಿಗರನ್ನು ಸೆಳೆಯಲು ಜುಲೈ ಅಥವಾ ಆಗಸ್ಟ್‌ನಲ್ಲಿ ‘ಸೋಮನಾಥಪುರ ಉತ್ಸವ’ ಆಚರಿಸಲು ಮುಂದಾಗಿದೆ.

ಇದೀಗ ಯುನೆಸ್ಕೋ ಮಾನ್ಯತೆ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ‘ಸೋಮನಾಥಪುರ ಚನ್ನಕೇಶವ’ ದೇಗುಲವನ್ನು ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ‘ಸೋಮನಾಥಪುರ ಉತ್ಸವ’ ಆಚರಿಸಲು ಪ್ರವಾಸೋದ್ಯಮ ಇಲಾಖೆ ತೀರ್ಮಾಸಿದೆ.

ಹೊಯ್ಸಳರು ನಿರ್ಮಿಸಿರುವ ಸೋಮನಾಥಪುರದ ಚನ್ನಕೇಶವ ದೇವಾಲಯದ ಶಿಲ್ಪಕಲೆಗೆ ಮನಸೋಲದವರೇ ಇಲ್ಲ. ಇಂಥ ಸುಂದರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಾಲಯ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯ ಪ್ರವಾಸಿಗರನ್ನು ಸೆಳೆಯುತ್ತಿರಲಿಲ್ಲ. ಹೆಚ್ಚಿನ ಪ್ರವಾಸಿಗರು ಮೈಸೂರು ಅರಮನೆ, ಚಾಮುಂಡಿಬೆಟ್ಟ ಹಾಗೂ ಮೃಗಾಲಯಕ್ಕೆ ಭೇಟಿ ನೀಡಿ ಕೊಡಗು, ಊಟಿ ಅಥವಾ ವಯನಾಡು ಕಡೆಗೆ ತೆರಳುತ್ತಾರೆ. ಆದರೆ, ಚನ್ನಕೇಶವ ದೇವಾಲಯಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡುವವರ ಸಂಖ್ಯೆ 300 ರಿಂದ 400 ಮಾತ್ರ. ಉಳಿದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ 100ಕ್ಕಿಂತ ಕಡಿಮೆ ಇರುತ್ತದೆ. ಇದೀಗ ಉತ್ಸವದ ಮೂಲಕ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಸೋಮನಾಥಪುರ ದೇಗುಲದ ಇತಿಹಾಸ, ಹೊಯ್ಸಳರ ಕಾಲದ ಶಿಲ್ಪಕಲೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ‘ಸೋಮನಾಥಪುರ ಉತ್ಸವ’ ಆಯೋಜಿಸಲು ಮುಂದಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಹಂಪಿ ಉತ್ಸವದಲ್ಲಿ ವಿದೇಶಿ ಪ್ರವಾಸಿಗರನ್ನು ಸೆಳೆದಂತೆ, ಸೋಮನಾಥಪುರಕ್ಕೂ ಹೊರರಾಜ್ಯ ಹಾಗೂ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವುದೇ ಉತ್ಸವದ ಪ್ರಮುಖ ಉದ್ದೇಶವಾಗಿದೆ. ದೇವಾಲಯದ ವಿಶೇಷತೆ ಏನು? ಯಾವ ರಾಜರ ಕಾಲದಲ್ಲಿ ನಿರ್ಮಾಣವಾಯಿತು? ಇಲ್ಲಿನ ಶಿಲ್ಪಕಲೆಯ ವೈಶಿಷ್ಟ್ಯ ಏನು? ಯುನೆಸ್ಕೋ ಮಾನ್ಯತೆ ಲಭಿಸಿದ್ದು ಹೇಗೆ? ಎಂಬಿತ್ಯಾದಿ ಮಾಹಿತಿಗಳನ್ನು ಪ್ರವಾಸಿಗರಿಗೆ ತಿಳಿಸುವ ಕಾರ್ಯವೂ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಾರನ್ನು ಕರೆಸಬೇಕು, ಭರತನಾಟ್ಯ, ಲೇಸರ್ ಶೋ, ಧ್ವನಿ-ಬೆಳಕು, ಐತಿಹಾಸಿಕ ಕಾರ್ಯಕ್ರಮ ನಡೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಉತ್ಸವದಲ್ಲಿ ಬಿಗ್ ಸ್ಕ್ರೀನ್‌ನಲ್ಲಿ ಹೊಯ್ಸಳರ ಇತಿಹಾಸ, ಶಿಲ್ಪಕಲೆ, ಸಂಸ್ಕೃತಿಯನ್ನು ಪ್ರದರ್ಶಿಸುವ ಆಲೋಚನೆಯೂ ಪ್ರವಾಸೋದ್ಯಮ ಇಲಾಖೆಯಲ್ಲಿದೆ.

ಹೊರಗಡೆಯಿಂದ ಆಗಮಿಸುವ ಪ್ರವಾಸಿಗರಿಗೆ ವಾಸ್ತವ್ಯ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಜನದಟ್ಟಣೆ ಇರುವ ಬಸ್ ನಿಲ್ದಾಣ, ರೈಲು ನಿಲ್ದಾಣ, ಚಾಮುಂಡಿಬೆಟ್ಟ, ಮೃಗಾಲಯ, ಕಾರಂಜಿ ಕೆರೆಗಳಲ್ಲಿ ಸೋಮನಾಥಪುರ ಉತ್ಸವದ ಹೋರ್ಡಿಂಗ್ಸ್ ಹಾಕಿ ಪ್ರಚಾರ ನಡೆಸುವ ಚಿಂತನೆ ಇದೆ. ಈ ಸಂಬಂಧ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಪ್ರವಾಸೋದ್ಯಮ ಸಚಿವರ ಜತೆ ಶೀಘ್ರದಲ್ಲೇ ಸಭೆ ನಡೆಸಲಿದ್ದು, ಸಭೆಯಲ್ಲಿ ‘ಸೋಮನಾಥಪುರ ಉತ್ಸವ’ದ ದಿನಾಂಕ ಮತ್ತು ರೂಪುರೇಷೆಯ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಇತಿಹಾಸ ಪ್ರಸಿದ್ಧ ದೇವಾಲಯ

ಮೈಸೂರಿನಿಂದ 30 ಕಿ.ಮೀ. ದೂರದಲ್ಲಿರುವ ತಿ.ನರಸೀಪುರ ತಾಲೂಕಿನ ಸೋಮನಾಥಪುರದಲ್ಲಿ ಹೊಯ್ಸಳ ಸಾಮ್ರಾಜ್ಯದ ದಂಡನಾಯಕನಾಗಿದ್ದ ಸೋಮನಾಥ 1268ರಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದನು. ಶಿಲ್ಪಕಲಾ ವೈಭವಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ. 13 ನೇ ಶತಮಾನದಲ್ಲಿ ಸೋಮನಾಥಪುರ ಅಗ್ರಹಾರವಾಗಿತ್ತು. ‘ಚತುರ್ವೇದಿಮಂಗಲ ವಿದ್ಯಾನಿಧಿ ಪ್ರಸನ್ನ ಸೋಮನಾಥಪುರ’ ಎಂಬುದು ಸೋಮನಾಥಪುರದ ಪೂರ್ಣ ಹೆಸರು. ಇಲ್ಲಿರುವ 7 ಶಾಸನಗಳು ದೇವಾಲಯ, ಕಲೆ ಮತ್ತು ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ ಮಹತ್ವದ ಮಾಹಿತಿ ಒದಗಿಸುತ್ತವೆ. ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗಲಿಯ ಮೇಲೆ ಪೂರ್ವಾಭಿಮುಖವಾಗಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಜಗುಲಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ಎಲ್ಲ ಹೊಯ್ಸಳ ದೇವಾಲಯಗಳಲ್ಲಿ ಇರುವಂತೆ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳನ್ನು ಈ ದೇವಾಲಯದಲ್ಲೂ ಕಾಣಬಹುದು.

ವ್ಯಾಪಾರ ಅಭಿವೃದ್ಧಿ

ಸೋಮನಾಥಪುರ ದೇಗುಲಕ್ಕೆ ಬಂದ ಮೇಲೆ ಇಲ್ಲಿಂದ ಯಾವ್ಯಾವ ಪ್ರವಾಸಿ ತಾಣಗಳಿಗೆ ಹೋಗಬಹುದು? ಅಲ್ಲಿಗೆ ಎಷ್ಟು ದೂರ ಆಗುತ್ತದೆ? ಏನೆಲ್ಲ ಸೌಲಭ್ಯಗಳಿರುತ್ತವೆ ಎಂಬ ಮಾಹಿತಿ ನೀಡುವ ಟೂರಿಸಂ ಸರ್ಕಿಟ್ ರಚಿಸಲು ಪ್ರವಾಸೋದ್ಯಮ ಇಲಾಖೆ ತಯಾರಿ ನಡೆಸುತ್ತಿದೆ. ಇದರಿಂದ ಪ್ರವಾಸಿಗರು ಹೆಚ್ಚು ದಿನ ಮೈಸೂರಿನಲ್ಲೇ ಉಳಿಯುವಂತಾಗುತ್ತದೆ. ಪ್ರವಾಸೋದ್ಯಮ-ವ್ಯಾಪಾರ-ವಹಿವಾಟು ಕೂಡ ಅಭಿವೃದ್ಧಿಯಾಗುತ್ತದೆ ಎಂಬ ಆಲೋಚನೆ ಪ್ರವಾಸೋದ್ಯಮ ಇಲಾಖೆಗಿದೆ.

ಯುನೆಸ್ಕೋ ಮಾನ್ಯತೆ ಪಡೆದಿರುವ ಮೈಸೂರಿನ ‘ಸೋಮನಾಥಪುರ ಚನ್ನಕೇಶವ’ ದೇಗುಲವನ್ನು ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಫೆಬ್ರವರಿಯಲ್ಲಿ ‘ಸೋಮನಾಥಪುರ ಉತ್ಸವ’ ಆಚರಿಸಬೇಕಿತ್ತು. ಅಷ್ಟರಲ್ಲಿ ಲೋಕಸಭಾ ಚುನಾವಣೆ ಬಂತು. ಹಾಗಾಗಿ ಉತ್ಸವವನ್ನು ಮುಂದೂಡಬೇಕಾಯಿತು. ಇದೀಗ ಜುಲೈ ಅಂತ್ಯಕ್ಕೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಉತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಎಂ.ಕೆ.ಸವಿತಾ ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net