ಸೋಮೇಶ್ವರ ಪುರಸಭೆಗೆ ಸಿಬ್ಬಂದಿ ಚಿಂತೆ

someshwara new
Published on

ಉಳ್ಳಾಲ: ರಾಜ್ಯದ ಅತೀ ದೊಡ್ಡದೆನಿಸಿದ್ದ ಸೋಮೇಶ್ವರ ಗ್ರಾಮ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿ ಒಂದೂವರೆ ವರ್ಷವಾಗುತ್ತಾ ಬಂದರೂ ಸಿಬ್ಬಂದಿ ನೇಮಕವಾಗಿಲ್ಲ. ಇಲ್ಲಿ ಬರೋಬ್ಬರಿ 97 ಶಾಶ್ವತ ಹುದ್ದೆಗಳಿದ್ದರೂ, ಇರುವುದು ಇಬ್ಬರು ಮಾತ್ರ.

ಹಿಂದೆ ಸೋಮೇಶ್ವರ ಗ್ರಾಮ ಪಂಚಾಯಿತಿ ಆಗಿದ್ದಾಗ 20 ವಾರ್ಡ್‌ಗಳು ಹಾಗೂ 62 ಸದಸ್ಯರಿದ್ದು ರಾಜ್ಯದಲ್ಲೇ ಅತಿದೊಡ್ಡ ಗ್ರಾಮವಾಗಿತ್ತು. ಇಷ್ಟು ದೊಡ್ಡ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಬೇಕು ಎನ್ನುವ ಬೇಡಿಕೆ ಗ್ರಾಮಸ್ಥರದ್ದಾಗಿತ್ತು.

ಎರಡು ವರ್ಷಗಳ ಹಿಂದೆ ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿಸುವ ಬದಲು ಏಕಾಏಕಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಿತ್ತು. ಒಂದೂವರೆ ವರ್ಷದ ಹಿಂದೆ ಈ ಪ್ರಕ್ರಿಯೆ ಮುಗಿದು ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ ವಾರ್ಡ್ ವಿಂಗಡಣೆಯಾಯಿತು. ಪ್ರಸ್ತುತ 23 ವಾರ್ಡ್‌ಗಳನ್ನಾಗಿಸಿದ್ದು, ಮುಂದೆ ನಡೆಯಲಿರುವ ಪ್ರಥಮ ಚುನಾವಣೆಯಲ್ಲಿ 23 ಸದಸ್ಯರು ಆಯಾ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಲಿದ್ದಾರೆ.

ಯೋಜನೆ ಕಳಿಸಲು ಇಂಜಿನಿಯರೇ ಇಲ್ಲ!

ಪುರಸಭೆಯಾದ ಬಳಿಕ ಅಧಿಕಾರಿಗಳ ಸಹಿತ 97 ಸಿಬ್ಬಂದಿ ಅಗತ್ಯತೆಯನ್ನು ಸರ್ಕಾರ ಗುರುತಿಸಿದೆ. ಆದರೆ ಪ್ರಸ್ತುತ ಶಾಶ್ವತ ಸಿಬ್ಬಂದಿಯಾಗಿ ಮುಖ್ಯಾಧಿಕಾರಿ ಮತ್ತು ವ್ಯವಸ್ಥಾಪಕರು ಮಾತ್ರ ಇದ್ದಾರೆ. ಇವರನ್ನು ಹೊರತುಪಡಿಸಿ 10 ಸಿಬ್ಬಂದಿ, 6 ಪೌರ ಕಾರ್ಮಿಕರಿದ್ದು, ಇವರನ್ನು ನೇರ ನೇಮಕಾತಿಗೊಳಿಸಲಾಗಿದೆ. ಗ್ರಾಪಂನಲ್ಲಿದ್ದ ಐವರು ಸಿಬ್ಬಂದಿಯನ್ನು ಉಳಿಸಿಕೊಳ್ಳಲಾಗಿದ್ದು ಅವರನ್ನು ಶಾಶ್ವತಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹೊಸ ಕಟ್ಟಡ ನಿರ್ಮಾಣದ ಯೋಜನೆ ಸಿದ್ಧಪಡಿಸಿ ಕಳುಹಿಸುವಂತೆ ಸೂಚನೆ ಕಳುಹಿಸಿರುವ ಸರ್ಕಾರ ಇಂಜಿನಿಯರ್ ಅನ್ನು ನೇಮಕ ಮಾಡದ ಕಾರಣ ಯೋಜನೆ ಸಿದ್ಧಪಡಿಸಲು ಸಾಧ್ಯವಾಗಿಲ್ಲ.

ಪರಿಸರ ಇಂಜಿನಿಯರ್, ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕ, ಕಂದಾಯ ನಿರೀಕ್ಷಕ, ಕಿರಿಯ ಇಂಜಿನಿಯರ್ ಎರಡು ಹುದ್ದೆ, ಹಿರಿಯ ಆರೋಗ್ಯಾಧಿಕಾರಿ, ಆರೋಗ್ಯ ನಿರೀಕ್ಷಕ ಎರಡು ಹುದ್ದೆ, ಪ್ರಥಮ ದರ್ಜೆ ಸಹಾಯಕ ಎರಡು ಹುದ್ದೆ ಖಾಲಿ, ಬಿಲ್ ಕಲೆಕ್ಟರ್ ಹುದ್ದೆ ಖಾಲಿಯಿದೆ. 35 ಪೌರಕಾರ್ಮಿಕ ಪೈಕಿ ಆರು ಮಂದಿಯಿದ್ದಾರೆ. ವಾರಕ್ಕೊಮ್ಮೆ ಉಳ್ಳಾಲ ನಗರಸಭೆಯಿಂದ ಕಿರಿಯ ಅಭ್ಯಂತರರನ್ನು, ವಾರಕ್ಕೆರಡು ದಿನ ಆರೋಗ್ಯ ನಿರೀಕ್ಷಕರನ್ನು ಕರೆಸಿಕೊಳ್ಳಲಾಗುತ್ತಿದೆ.

ಇರುವ ಸಿಬ್ಬಂದಿಯಲ್ಲೇ ಸೇವೆ

ಅತೀ ಹೆಚ್ಚು ಜನಸಂಖ್ಯೆಯಿರುವ ಸೋಮೇಶ್ವರ ಪುರಸಭೆಗೆ ಸಿಬ್ಬಂದಿ ಕೊರತೆಯೇನೋ ಇದೆ. ಆದರೆ ಇರುವ ಸಿಬ್ಬಂದಿಯನ್ನೇ ಬಳಸಿ ಗುಣಮಟ್ಟದ ಸೇವೆ ನೀಡಲಾಗುತ್ತಿದ್ದು ಜನರಿಂದಲೂ ಯಾವುದೇ ದೂರುಗಳಿಲ್ಲ. ಕಟ್ಟಡ, ವ್ಯಾಪಾರ ಪರವಾನಗಿ, ತೆರಿಗೆ, ನೀರು ಶುಲ್ಕ, ಜನನ-ಮರಣ ಪ್ರಮಾಣ ಪತ್ರ ಸೇವೆ ಆನ್‌ಲೈನ್‌ನಲ್ಲಿ ನೀಡುವ ಮೂಲಕ ಅತ್ಯಲ್ಪ ಸಮಯದಲ್ಲೇ ಅಂತರ್ಜಾಲ ವ್ಯವಸ್ಥೆ ಮೇಲೆ ಹಿಡಿತ ಸಾಧಿಸಿರುವುದು ಇಲ್ಲಿನ ವಿಶೇಷ.

ಸ್ವಚ್ಛತೆಯಲ್ಲೂ ಮುಂಚೂಣಿ

ಸ್ವಚ್ಛತೆ ಪಾಲನೆ ನಿಟ್ಟಿನಲ್ಲೂ ಗಮನಹರಿಸಿರುವ ಪುರಸಭೆ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಇಲ್ಲಿಗೆ 35 ಪೌರಕಾರ್ಮಿಕರ ಅಗತ್ಯವಿದ್ದರೂ ಆರು ಮಂದಿ ಮಾತ್ರ ಇದ್ದಾರೆ. ಹಸಿಕಸ, ಒಣಕಸ ವಿಲೇವಾರಿ ಸುಸೂತ್ರವಾಗಿ ನಡೆಯುತ್ತಿದೆ. ಅಲ್ಲದೆ ಹಸಿಕಸ ಸಮಸ್ಯೆಗೆ ಇಲ್ಲೇ ಮುಕ್ತಿ ಕಾಣಿಸುವ ನಿಟ್ಟಿನಲ್ಲಿ ಪುರಸಭೆಯ ವಠಾರದಲ್ಲೇ ತರಕಾರಿ ಬೆಳೆಸಲಾಗುತ್ತಿದೆ. 8 ವಾರ್ಡ್‌ಗಳಿಂದ ಕಸಿಕಸ ತಂದು ಪುರಸಭೆ ವಠಾರದಲ್ಲೇ ಸಾವಯವ ಗೊಬ್ಬರ ತಯಾರಿಸಿ ತರಕಾರಿಗೆ ಬಳಸಲಾಗುತ್ತಿದ್ದು ಉತ್ತಮ ಫಲವೂ ಬಂದಿದೆ.

ಅತ್ಯಂತ ದೊಡ್ಡ ಗ್ರಾಮ ಸೋಮೇಶ್ವರ ಪುರಸಭೆಯನ್ನಾಗಿ ಮೇಲ್ದರ್ಗೇರಿದೆ. ಇಲ್ಲಿ ಸಿಬ್ಬಂದಿ ಕೊರತೆಯಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರಲ್ಲಿ ಮಾತುಕತೆ ನಡೆಸಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ.

ಯು.ಟಿ.ಖಾದರ್, ಶಾಸಕ

ಸಿಬ್ಬಂದಿ ಕೊರತೆ ಪುರಸಭೆಯ ಕೆಲಸಕ್ಕೆ ಸಮಸ್ಯೆಯಾಗುತ್ತಿದ್ದರೂ, ಇರುವ ಸಿಬ್ಬಂದಿಯೇ ಜನರಿಗೆ ಸಮಯಕ್ಕನುಗುಣವಾಗಿ ಸೇವೆ ನೀಡುತ್ತಿದ್ದಾರೆ. ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಲಾಗಿದೆ. ಪ್ರಮುಖ ಸೇವೆಗಳನ್ನು ಅಂತರ್ಜಾಲದಲ್ಲೇ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ನೇಮಕವಾದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

ವಾಣಿ ವಿ.ಆಳ್ವ, ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net