ಸೋಮೇಶ್ವರ ದರ್ಶನ ಪಡೆದ ಭಕ್ತಗಣ

14MURAGOD1A
Published on

ಮುರಗೋಡ/ರುದ್ರಾಪುರ: ಸಮೀಪದ ಸೊಗಲ ಸೋಮೇಶ್ವರನ ಕ್ಷೇತ್ರದಲ್ಲಿ ಮಂಗಳವಾರ ಜಲಪಾತದಡಿ ಭಕ್ತರು ಸ್ನಾನ ಮಾಡಿ ಸಾಗರೋಪಾದಿಯಲ್ಲಿ ದೇವರ ದರ್ಶನ ಪಡೆದರು. ಎಲ್ಲಿ ನೋಡಿದರಲ್ಲಿ ಜನಸಾಗರದಿಂದ ಕ್ಷೇತ್ರ ಕಿಕ್ಕಿರಿದಿತ್ತು.

ಸೋಮೇಶ್ವರನ, ಶಿವ-ಪಾರ್ವತಿ ಗದ್ದುಗೆಯನ್ನು ಹೂಗಳಿಂದ ಸಿಂಗರಿಸಲಾಗಿತ್ತು. ವಿವಿಧ ಪೂಜಾ ಕೈಂಕರ್ಯ ಜರುಗಿದವು. ತೆಪ್ಪದ ರಥೋತ್ಸವನ್ನು ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳಗಳಿಂದ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ತೆಪ್ಪದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಸಂಜೆ ಹೊಸೂರ ಗುರುಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಹೊಸೂರ-ಬೈಲಹೊಂಗಲ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಹಿರಿಯ ಅರ್ಚಕರಾದ ನಿಂಗಯ್ಯ ಪೂಜೇರಿ, ಗುರುಸ್ವಾಮಿ ಹೊಸಪೇಟಿಮಠ ಪ್ರಾರ್ಥಿಸಿದರು. ಟ್ರಸ್ಟ್ ಅಧ್ಯಕ್ಷ, ಆಡಳಿತ ಮಂಡಳಿ ಸರ್ವ ಸದಸ್ಯರು, ಸುತ್ತಲಿನ ಗ್ರಾಮಗಳ ಪ್ರಮುಖರು ಹಾಗೂ ತಪ್ಪೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಬಾಳೆಹಣ್ಣು, ಹೂವು ರಥಕ್ಕೆ ಅರ್ಪಿಸಿ ಭಕ್ತಿ-ಭಾವ ಮೆರದರು. ಕೆಳಗಿನ ಹೊಂಡದಲ್ಲಿ ಹಾಗೂ ಜಲಾಧಾರೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.

ಅಪಾರ ಜನಸ್ತೋಮ: ಬೆಳಗ್ಗೆಯಿಂದಲೇ ಚಕ್ಕಡಿ, ಬೈಕ್, ವಾಹನ, ಟ್ರಾೃಕ್ಟರ್ ಮುಖಾಂತರ ಸಾವಿರಾರು ಭಕ್ತರು ಆಗಮಿಸಿ ಸ್ನಾನ ಮಾಡಿ, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ವಿಶೇಷ ಭೋಜನ ಸವಿದರು. ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಮಕರ ಸಂಕ್ರಮಣ ಆಚರಿಸಿದರು. ಮಕ್ಕಳು ಜಿಂಕೆ ವನ, ಹುಲಿ ಗವಿ ಇತರ ದೇವಾಲಯಗಳಿಗೂ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net