

ಅನ್ಸಾರ್ ಇನೋಳಿ ಉಳ್ಳಾಲ
ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಮನಮೋಹಕ ಕಡಲ ಕಿನಾರೆ ಹೊಂದಿರುವ ಸೋಮೇಶ್ವರ ಪ್ರವಾಸೋದ್ಯಮ ತಾಣವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಕೃಪಾಕಟಾಕ್ಷ ತೋರಬೇಕಿದೆ.
ಸೋಮೇಶ್ವರ ಎಂದ ಕೂಡಲೇ ಮೊದಲು ನೆನಪಿಗೆ ಬರುವುದು ಶ್ರೀ ಸೋಮನಾಥೇಶ್ವರ ದೇವಸ್ಥಾನ, ರಾಣಿ ಅಬ್ಬಕ್ಕಳ ಹೋರಾಟದ ಇತಿಹಾಸ, ಮೈಮನ ಸೂರೆಗೊಳ್ಳುವ ಕಡಲ ಕಿನಾರೆ. ಇವೆಲ್ಲ ಕಾರಣಗಳಿಂದ ಇಲ್ಲಿಗೆ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಸೋಮನಾಥ ದೇವಸ್ಥಾನವೂ ನಾಲ್ಕು ವರ್ಷಗಳ ಹಿಂದೆ ಮರುನಿರ್ವಾಣಗೊಂಡು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜತೆಗೆ ಸಮುದ್ರದ ತಟದಲ್ಲಿರುವ ರುದ್ರಪಾದೆ ಕಡಲ ಕಿನಾರೆಯ ಸೌಂದರ್ಯ ಹೆಚ್ಚಿಸಿದೆ. ಈ ಹಿನ್ನೆಲೆ ಪರಿಸರವನ್ನು ಪ್ರವಾಸೋದ್ಯಮಕ್ಕೆ ತಕ್ಕಂತೆ ರೂಪುರೇಷೆ ನೀಡುವ ಅನಿವಾರ್ಯತೆ ಇದೆ.
ಸ್ವಾತಂತ್ರೃ ಹೋರಾಟದ ಕಹಳೆ
ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ರಾಣಿ ಅಬ್ಬಕ್ಕ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಇಲ್ಲಿಂದಲೇ ಹೋರಾಟ ಆರಂಭಿಸಿದ್ದರು ಎನ್ನುವ ಇತಿಹಾಸವಿದೆ. ದಕ್ಷಿಣ ಭಾರತದಲ್ಲಿ ಕನ್ಯಾಕುವಾರಿ ಬಳಿಕ ಎರಡನೇ ಸ್ಥಾನದಲ್ಲಿರುವ ಸೋಮೇಶ್ವರ ಬೀಚ್ ಅಭಿವದ್ಧಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರು.2011-21ರಲ್ಲಿ ನಿರ್ಮಿಸಲಾಗಿದ್ದ ದೇವಸ್ಥಾನ ಬೀಚ್ ಸಂಪರ್ಕ ಮೆಟ್ಟಿಲು ಎರಡು ವರ್ಷಗಳ ಹಿಂದೆ ಕಡಲ್ಕೊರೆತದಿಂದ ಕೊಚ್ಚಿ ಹೋಗಿದ್ದು ಮತ್ತೆ ನಿರ್ಮಿಸಲಾಗಿದೆ. 2012ರಲ್ಲಿ ಒಂದು ಕಿ.ಮೀ. ರಸ್ತೆಗೆ ಕಾಂಕ್ರೀಟ್, ಸಾರ್ವಜನಿಕ ಸ್ನಾನಗೃಹ, ಶೌಚಗೃಹ ಮತ್ತು ಬೆರಳೆಣಿಕೆಯ ಸಿಮೆಂಟಿನ ಆಸನಗಳನ್ನು ಅಳವಡಿಸಲಾಗಿತ್ತು. ದೇವರ ಕೆರೆಯನ್ನು ಶಾಸಕ ಯು.ಟಿ.ಖಾದರ್ 1.40 ಕೋಟಿ ರೂ. ಅನುದಾನದಲ್ಲಿ ಹಿಂದೆ ಅಭಿವೃದ್ಧಿಪಡಿಸಲಾಗಿದ್ದರೆ, ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಬ್ರಹ್ಮಕಲಶ ಸಂದರ್ಭ ಮತ್ತಷ್ಟು ಅಭಿವೃದ್ಧಿಪಡಿಸಿ ಸೌಂದರ್ಯ ಹೆಚ್ಚಿಸಲಾಗಿದೆ.
ಪ್ರಸ್ತುತ ಸ್ಥಿತಿ:
ದೇವಸ್ಥಾನದ ಬಲಭಾಗದಲ್ಲಿ ನಿರ್ಮಿಸಲಾಗಿದ್ದ ಸಿಮೆಂಟ್ ಆಸನಗಳು ಕಡಲಬ್ಬರಕ್ಕೆ ಸಿಲುಕಿ ನಾಮಾವಶೇಷವಾಗಿದೆ. ಎಡಭಾಗದಲ್ಲಿರುವ ಬಂಡೆ ಮೇಲೆ ಗ್ರಾಪಂನಿಂದ ಅಳವಡಿಸಿರುವ ಆಸನಗಳು ಶಿಥಿಲವಾಗಿದೆ. ಬೀಚ್ ಆಸುಪಾಸು ಪ್ಲಾಸ್ಟಿಕ್, ಬಾಟಲ್ ರಾಶಿ ಬಿದ್ದಿವೆ. ಆಗೊಮ್ಮೆ ಈಗೊಮ್ಮೆ ಸ್ವಚ್ಛತಾ ಕಾರ್ಯ ನಡೆದರೂ ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಿದೆ. ನಿರ್ವಹಣೆ ಕೊರತೆಯಿಂದಾಗಿ ಒಂದು ಹಂತದಲ್ಲಿ ಮುಚ್ಚಲಾಗಿದ್ದ ಶೌಚಗಹದ ಶವರ್ ಸಹಿತ ಇತರ ವಸ್ತುಗಳು ಕಳ್ಳರ ಪಾಲಾಗಿದ್ದವು. ಬಳಿಕ ಸೋಮೇಶ್ವರ ಪುರಸಭೆಯಿಂದ ಶೌಚಗೃಹ ನವೀಕರಣಗೊಂಡು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ.
ಡಿಕೆಶಿ ಹೇಳಿಕೆ ಆಶಾದಾಯಕ
ಇತ್ತೀಚಿಗೆ ಪುತ್ತೂರಿಗೆ ಬಂದಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಅವರು ಕರಾವಳಿಯಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿ ಯುವಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅವರ ವಾತುಗಳು ಸೋಮೇಶ್ವರ ಭಾಗಕ್ಕೆ ಆಶಾದಾಯಕ ಎನಿಸಿದೆ.
ಉದ್ಯೋಗಾವಕಾಶ
ಸೋಮೇಶ್ವರ ಬೀಚ್ ಅಭಿವದ್ಧಿಯಾದರೆ ದೇವಸ್ಥಾನಕ್ಕೂ ಆದಾಯ ಹೆಚ್ಚಾಗಲಿದೆ. ಉಳ್ಳಾಲ ದರ್ಗಾ, ಮೊಗವೀರ ಪಟ್ಣ ಬೀಚ್, ಸೋಮೇಶ್ವರ ದೇವಸ್ಥಾನ ಮತ್ತು ಬೀಚ್ ಸಹಿತ ಆಸುಪಾಸಿನ ಸುಂದರ ತಾಣಗಳನ್ನು ಪ್ರವಾಸೋದ್ಯಮ ಪಟ್ಟಿಗೆ ಸೇರಿಸುವ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಉತ್ತಮ ಅವಕಾಶ ಇದೆ. ಇದರಿಂದಾಗಿ ಉಳ್ಳಾಲ ಭಾಗದ ಯುವಸಮುದಾಯಕ್ಕೆ ಉದ್ಯೋಗ ನೀಡುವ ಅವಕಾಶವೂ ಒದಗಿ ಬರಲಿದೆ. ಇಂಥ ಬೆಳವಣಿಗೆ ನಿರೀಕ್ಷಿಸಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು, ಸಂ ಸಂಸ್ಥೆಗಳು ಕೈಜೋಡಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಉಳ್ಳಾಲ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಅವಕಾಶ ಇರುವ ತಾಣ ಸೋಮೇಶ್ವರ. ಇಲ್ಲಿ ದೇವಸ್ಥಾನ ವಾತ್ರವಲ್ಲದೆ ಕಡಲ ಕಿನಾರೆಯಲ್ಲಿ ಹಲವು ವಿಶೇಷತೆ ಜತೆ ಇತಿಹಾಸವೂ ಇದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಉದ್ಯೋಗ ಸೃಷ್ಟಿ ಜತೆ ಆದಾಯ ಹೆಚ್ಚಾಗಿ ಸ್ಥಳೀಯ ಭಾಗದಲ್ಲೂ ಅಭಿವೃದ್ಧಿ ಸಾಧಿಸಬಹುದು. - ದಿನೇಶ್ ನಡಾರ್, ಪ್ರವಾಸೋದ್ಯಮ ತಾಣ ವಿನ್ಯಾಸಗಾರ. ಸೋಮೇಶ್ವರ ಒಂದು ಪ್ರದೇಶ ವಾತ್ರವಲ್ಲ, ಈ ಹೆಸರೇ ಒಂದು ಇತಿಹಾಸ.ಕಡಲ ತಟದಲ್ಲಿರುವ ಸೋಮನಾಥ ದೇವಸ್ಥಾನ, ರುದ್ರಪಾದೆ, ಕಡಲಕಿನಾರೆ, ದೇವರ ಕೆರೆ ಹೀಗೆ ಇಲ್ಲಿನ ಪ್ರತಿಯೊಂದು ಹೆಸರಲ್ಲೂ ಇತಿಹಾಸ ಇದೆ. ಪ್ರವಾಸೋದ್ಯಮಕ್ಕೆ ಇದಕ್ಕಿಂತ ಸುಂದರ ಪರಿಸರ ಇನ್ನೆಲ್ಲೂ ಸಿಗದು. - ವಿಕ್ಕಿ ಪೂಜಾರಿ, ಕೋಟೆಕಾರ್ ನಿವಾಸಿ. https://www.vijayavani.net/pratibha-karanji-at-jalsur-on-13th-and-14th https://www.vijayavani.net/workshop-for-primary-high-school-teachers