

ಬಿಡದಿ
ಅಡಕೆ ತೋಟ ಇದೆ, ಕೊಯ್ಲು ಮಾಡಿಕೊಳ್ಳಿ ಎಂದು ಅಡಕೆ ವ್ಯಾಪಾರಿಯನ್ನು ನಂಬಿಸಿ ಲಕ್ಷಾಂತರ ಹಣವನ್ನು ದೋಖಾ ಮಾಡಿರುವ ಪ್ರಕರಣ ತಡವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬಿಡದಿ ಹೋಬಳಿಯ ಅಂಚಿಪುರ ಗ್ರಾಮದಲ್ಲಿ ಅಡಕೆ ತೋಟ ಇದೆ ಎಂದು ಚಾಂದ್‌ಪಾಷಾ ಎಂಬಾತ ಕುಣಿಗಲ್ ತಾಲೂಕಿನ ನಿಟ್ಟೂರು ಗ್ರಾಮದ ಜಯರಂಗಯ್ಯ ಅವರನ್ನು ನಂಬಿಸಿ 3,65,000 ರೂ. ಧೋಖಾ ಮಾಡಿದ್ದಾನೆ.
ಅ.13ರಂದು ಬೆಟ್ಟಹಳ್ಳಿ ಗ್ರಾಮದಲ್ಲಿನ ಅಡಕೆ ತೋಟದಲ್ಲಿ ಜಯರಂಗಯ್ಯ ಅವರು ಆಳುಗಳ ಮೂಲಕ ಅಡಕೆ ಕೀಳಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ತೆರಳಿದ್ದ ಚಾಂದ್‌ಪಾಷಾ, ನಾನು ಕನಕಪುರದವನು, ಅಂಚಿಪುರ ಗ್ರಾಮದಲ್ಲಿ ಅಡಕೆ ತೋಟ ಇದೆ ಎಂದು ತಿಳಿಸಿ ಪೋನ್ ನಂಬರ್ ನೀಡಿದ್ದ. ಅದರಂತೆ ಅ.16ರಂದು ಚಾಂದ್‌ಪಾಷಾಗೆ ಫೋನ್ ಮಾಡಿದ ಜಯರಂಗಯ್ಯ ಬರುತ್ತಿರುವುದಾಗಿ ತಿಳಿಸಿದ್ದರು. ಮಗನ ಜತೆಗೆ ಕಾರಿನಲ್ಲಿ ಬಿಡದಿಗೆ ಬಂದಿದ್ದರು.
ಬಸ್ ನಿಲ್ದಾಣಕ್ಕೆ ಬಂದ ಚಾಂದ್‌ಪಾಷಾ ಇವರನ್ನು ಅಂಚಿಪುರದ ಅಡಕೆ ತೋಟದ ಬಳಿ ಕರೆದುಕೊಂಡು ಹೋಗಿ ಅಲ್ಲಿದ್ದ ವ್ಯಕ್ತಿಯನ್ನು ತೋರಿಸಿ ಇವರೇ ತೋಟದ ಮಾಲೀಕರು ಎಂದು ಹೇಳಿ ತೋಟವನ್ನು ತೋರಿಸಿದ. ಒಂದು ಬೆಳೆಯ ಕಟಾವಿಗೆ 10,50,000 ರೂ. ಎಂದು ಹೇಳಿ ಮುಂಗಡವಾಗಿ 15,000 ರೂ. ಪಡೆದಿದ್ದ.
ಇದಾದ ಮಾರನೇ ದಿನವೇ ಜಯರಂಗಯ್ಯ ಅವರಿಗೆ ಕರೆ ಮಾಡಿದ ಚಾಂದ್‌ಪಾಷಾ 5 ಲಕ್ಷ ರೂ. ಮುಂಗಡ ನೀಡಿ ಅಡಕೆ ಕಟಾವು ಮಾಡಿ ಎಂದು ಹೇಳಿದ್ದ. ಅದರಂತೆ ಅ.17ರಂದು ಬಿಡದಿಗೆ ಬಂದು ಚಾಂದ್‌ಪಾಷಾಗೆ ಕರೆ ಮಾಡಿದಾಗ, ನಾನು ಬರುವುದು ತಡವಾಗುತ್ತದೆ, ತೋಟದ ಮಾಲೀಕರೇ ಬರುತ್ತಾರೆ ಅವರಿಗೆ ಹಣ ಕೊಡಿ ಎಂದು ಚಾಂದ್‌ಪಾಷಾ ತಿಳಿಸಿದ.
ಅದರಂತೆ ಮಾಲೀಕ ಎಂದು ಬಂದಿದ್ದ ವ್ಯಕ್ತಿಗೆ ಜಯರಂಗಯ್ಯ 3.5 ಲಕ್ಷ ರೂ. ನೀಡಿದ್ದರು. ಇತ್ತ ಚಾಂದ್‌ಪಾಷಾಗೆ ಮತ್ತೆ ಕರೆ ಮಾಡಿದಾಗ, ನನಗೆ ರಾಮನಗರದಲ್ಲಿ ಕೆಲಸವಿದ್ದು, ಮುಗಿಸಿ ಬರುತ್ತೇನೆ. ತೋಟಕ್ಕೆ ಹೋಗಿ ಅಡಕೆ ಕಟಾವು ಮಾಡುತ್ತಿರಿ ಎಂದು ಹೇಳಿದ್ದ. ಅಡಿಕೆ ತೋಟದಲ್ಲಿ ಅಡಕೆ ಕಟಾವು ಮಾಡಲು ಮುಂದಾದಾಗ ತೋಟ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಜಯರಾಮಯ್ಯ ಅವರನ್ನು ತಡೆದು, ಇದು ಕೆ.ಶಿವರಾಮು ಎಂಬುವರಿಗೆ ಸೇರಿದ ತೋಟ ಎಂದು ತಿಳಿಸಿದರು. ಆಗ ಜಯರಂಗಯ್ಯ ಅವರಿಗೆ ಹಣ ಪಡೆದವರು ತೋಟದ ನಿಜವಾದ ಮಾಲೀಕರಲ್ಲ ಎನ್ನುವುದು ಅರಿವಾಗಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.