ಮೂಕಪ್ರಾಣಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ದುಷ್ಕರ್ಮಿಗಳು

Dog dragging mng1
Published on

ಮಂಗಳೂರು: ಮೂಕಪ್ರಾಣಿ ನಾಯಿಯನ್ನು ವಾಹನಗಳಿಗೆ ಕಟ್ಟಿ ಎಳೆದೊಯ್ಯುವ ಮನಕಲಕುವ ಘಟನೆಯನ್ನು ಬೇರೆ ಕಡೆಯಲ್ಲಿ ಕೇಳಿದ್ದೇವೆ. ಈಗ ಅಂತಹ ಅಮಾನವೀಯ ಘಟನೆ ಮಂಗಳೂರಿನಲ್ಲೇ ನಡೆದಿದೆ.

ಸುರತ್ಕಲ್ ಎನ್‌ಐಟಿಕೆ ಸಮೀಪ ಏ.15ರಂದು ನಡೆದಿರುವ ಘಟನೆಯನ್ನು ಯುವಕರೊಬ್ಬರು ಚಿತ್ರೀಕರಿಸಿದ್ದು, ಅದನ್ನು ಅನಿಮಲ್ ಕೇರ್ ಟ್ರಸ್ಟ್ ಜತೆ ಹಂಚಿಕೊಂಡಿದ್ದಾರೆ. ಅದರಂತೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಏ.15ರಂದು ರಾತ್ರಿ ಸುಮಾರು 8.30ಕ್ಕೆ ಬೈಕ್‌ನ ಹಿಂದೆ ಹಗ್ಗದಲ್ಲಿ ನಾಯಿಯನ್ನು ಕಟ್ಟಿ ಇಬ್ಬರು(ಒಬ್ಬಾತ ಪಂಚೆ ಧರಿಸಿದ್ದಾನೆ) ಸಾಗುತ್ತಿದ್ದರು. ಅದರ ಹಿಂದೆಯೇ ಇನ್ನೊಂದು ನಾಯಿಕೂಡಾ ಸ್ವಲ್ಪ ದೂರ ಓಡೋಡಿ ಬಂದಿದೆ. ಚಿತ್ರೀಕರಿಸಿದವರು ಹೈವೇಯಲ್ಲಿ ಇದ್ದರೆ ದುಷ್ಕರ್ಮಿಗಳು ಸರ್ವಿಸ್ ರಸ್ತೆಯಲ್ಲಿದ್ದರು. ಕೆಲ ಹೊತ್ತಿನಲ್ಲೇ ಸೇತುವೆ ಬಂದ ಕಾರಣ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಈ ವಿಚಾರವನ್ನು ಬಹಿರಂಗ ಪಡಿಸಲು ಯುವಕರು ಬೆದರಿದ್ದು, ಕೆಲ ದಿನಗಳ ಬಳಿಕವಷ್ಟೇ ವಿಡಿಯೋವನ್ನು ಅನಿಮಲ್ ಕೇರ್ ಟ್ರಸ್ಟ್‌ಗೆ ಕಳುಹಿಸಿದ್ದಾರೆ. ಇಬ್ಬರೂ ಆರೋಪಿಗಳ ಮುಖವೂ ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುವಂತಿದೆ. ಇತ್ತೀಚೆಗೆ ಕೇರಳದಲ್ಲೂ ಇದೇ ರೀತಿಯ ಘಟನೆ ನಡೆದಿದ್ದು ನಾಯಿ ಚಪ್ಪಲಿ ಕಚ್ಚಿದೆ ಎಂಬ ಕಾರಣಕ್ಕೆ ಸಿಟ್ಟಾದ ಕ್ಸೇವಿಯರ್ ಎಂಬಾತ ಸ್ಕೂಟರ್‌ಗೆ ಕಟ್ಟಿ ನಾಯಿಯನ್ನು ಎಳೆದುಕೊಂಡುಹೋಗಿದ್ದ. ವಿಡಿಯೋ ವೈರಲ್ ಆದ ಬಳಿಕ ಆತನನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net