ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ; ಮತ್ತಿನಲ್ಲಿರುವ ಚಿಣ್ಣರ ವಿಡಿಯೋಗಳು ವೈರಲ್..

Front Child story
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೊಗಳು.
Published on

| ಗಂಗಾಧರ್ ಬೈರಾಪಟ್ಟಣ ರಾಮನಗರ

ಕರೊನಾದಿಂದ ಶಾಲೆಗಳು ಬಂದ್ ಆಗಿರುವ ಪರಿಣಾಮ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಕಂಗಾಲಾಗಿರುವ ಸಂದರ್ಭದಲ್ಲೇ ಮಕ್ಕಳಿಗೆ ಮದ್ಯಪಾನ ಮಾಡಿಸಿ ಮತ್ತಿನಲ್ಲಿ ಅವರು ಆಡುವ ಆಟಗಳನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಪ್ರಕರಣ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದೆ. ಬಾಳೆತೋಟವೊಂದರ ತೋಟದ ಮನೆ ಬಳಿ 10 ವರ್ಷದೊಳಗಿನ 7 ಮಕ್ಕಳಿಗೆ ಬಾಡೂಟದ ಜತೆ ಮದ್ಯ ನೀಡಿ ಕುಡಿಯುವಂತೆ ಉತ್ತೇಜಿಸುತ್ತಿರುವ ದೃಶ್ಯವನ್ನೊಳಗೊಂಡ ವಿಡಿಯೋ ಸೇರಿ 3 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮದ್ಯಪಾನ ಮಾಡಿದ ಬಳಿಕ ಮಕ್ಕಳು ಬೈದಾಡಿಕೊಳ್ಳುತ್ತಾರೆ. ಎಲ್ಲರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಬಾಲಕನೊಬ್ಬ ತನಗೆ ಮತ್ತಷ್ಟು ಎಣ್ಣೆ ಬೇಕು ಎಂದು ಕೂಗುವ ದೃಶ್ಯಗಳು ವಿಡಿಯೋಗಳಲ್ಲಿ ದಾಖಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

ಸ್ಪಷ್ಟತೆ ಇಲ್ಲ: ಈ ವಿಡಿಯೋಗಳು ಯಾವಾಗ, ಎಲ್ಲಿ ರೆಕಾರ್ಡ್ ಆಗಿವೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿ ಪ್ರಕಾರ ಇದು ಕನಕಪುರ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ.

ವಿಡಿಯೋಗಳನ್ನು ಪರಿಶೀಲಿಸಲಾಗುವುದು. ಸ್ಪಷ್ಟತೆ ದೊರೆತ ನಂತರ ಪ್ರಕರಣ ದಾಖಲಿಸುವ ಸಂಬಂಧ ಕ್ರಮವಹಿಸಲಾಗುವುದು.

| ಎಸ್.ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net