

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದೆ. ಎಲ್ಲವೂ ಶೀಘ್ರದಲ್ಲಿ ಸರಿದಾರಿಗೆ ಬರುವ ನಿರೀಕ್ಷೆ ಇದೆ. ವಿವಿ ಬಗ್ಗೆ ಕೆಲವು ಆರೋಪಗಳಿವೆ. ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ವಿವಿ ಸಿಂಡಿಕೇಟ್ ಸದಸ್ಯರ ಜತೆಯಲ್ಲಿ ಸಭೆ ನಡೆಸಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿವಿಯಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿವೆ. ದೊಡ್ಡ ಬದಲಾವಣೆಗೆ ಸ್ವಲ್ಪ ಸಮಯ ಬೇಕು ಎಂದರು.
ಬೆಳಗಾವಿ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಅಲ್ಲಿ ನೂರು ವರ್ಷದ ಹಿಂದಿನ ಚಿತ್ರಗಳು ಮರುಕಳಿಸಿದಂತಿತ್ತು. ಆಗಿನ ಕಾಲದಲ್ಲಿ ಕಾಂಗ್ರೆಸ್ ಅಷ್ಟೊಂದು ದೊಡ್ಡ ಸಮಾವೇಶ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಮೂಡಿತು. ಇಂದು ನಾವು ಗಾಂಧೀಜಿ ಬಗ್ಗೆ ಹೆಚ್ಚು ಪ್ರಚಾರ ಮಾಡದಿದ್ದರೆ ಗೋಡ್ಸೆಯೇ ಶ್ರೇಷ್ಠ ಎಂಬಂತೆ ಬಿಂಬಿಸಲಾಗುತ್ತದೆ. ಗಾಂಧೀಜಿ ವಿಚಾರಗಳನ್ನು ಎಲ್ಲರಿಗೂ ತಲುಪಿಸಬೇಕು ಎಂದು ಹೇಳಿದರು.
ನಮ್ಮ ರಾಜ್ಯದಿಂದ ಕೇಂದ್ರ ಸಚಿವರಾದವರು ಬೇರೆ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುತ್ತಾರೆ. ನಮ್ಮ ರಾಜ್ಯದ ಕೈಗಾರಿಕೆಗಳಿಗೆ ಸಹಕಾರ ನೀಡುವುದಿಲ್ಲ. ವಿಐಎಸ್‌ಎಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದರು.
ರಾಜ್ಯದ ಯಾವ ಸಂಸದರೂ ವಿಐಎಸ್‌ಎಲ್ ಉಳಿಸುವ ಬಗ್ಗೆ ಮಾತನಾಡುತ್ತಿಲ್ಲ. ಅದನ್ನು ಉಳಿಸಬೇಕಾದುದು ಎಲ್ಲರ ಜವಾಬ್ದಾರಿ. ಕೇವಲ ಭಾಷಣ ಮಾಡಿದರೆ ಪ್ರಯೋಜನವಿಲ್ಲ. ಕುಮಾರಸ್ವಾಮಿ ಯಾವ ರಾಜ್ಯದವರು? ಎಂಬ ಪ್ರಶ್ನೆ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.