

ಮೈಸೂರು: ರಾಮಾಯಣದ ಆಯ್ದ ಕೆಲ ಭಾಗವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ರೂಪಕ್ಕೆ ಅಳವಡಿಸುವ ಕಾರ್ಯ ಮಾಡಲಾಗುವುದು ಎಂದು ಕೇಂದ್ರದ ಪೆಟ್ರೋಲಿಯಂ, ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಕೇಂದ್ರ ಸಂಸ್ಕೃತಿ ಮಂತ್ರಾಲಯದಿಂದ ಆಯೋಜಿಸಿದ್ದ ನಾಲ್ಕು ದಿನಗಳ ‘ಮೈಸೂರು ಸಂಗೀತ ಸುಗಂಧ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.
ರಾಮಾಯಣವನ್ನು ಹಲವಾರು ಕವಿಗಳು ಬೇರೆ-ಬೇರೆ ಭಾಷೆಯಲ್ಲಿ ರಚನೆ ಮಾಡಿದ್ದಾರೆ. ಆದರೆ ಎಲ್ಲ ಕೃತಿಗಳಲ್ಲೂ ಶ್ರೀರಾಮಚಂದ್ರನ ಆದರ್ಶತನ, ವ್ಯಕ್ತಿತ್ವ ಹಾಗೂ ರಾಮರಾಜ್ಯದ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಲಾಗಿದೆ. ಆದ್ದರಿಂದ ರಾಮಾಯಣವನ್ನು ಓದಿದಂತಹವರು ಆದರ್ಶವಂತರಾಗಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬಹುದು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ರಾಮಾಯಣವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ಸಂಯೋಜನೆ ಮಾಡಲಾಗುವುದು ಎಂದರು.
ಈ ಕಾರ್ಯದಿಂದ ಗಾಯನದ ಮೂಲಕ ರಾಮಾಯಣದ ಸಾರವು ಎಲ್ಲರಿಗೂ ತಲುಪುತ್ತದೆ. ಅಲ್ಲದೇ ಮುಂದಿನ ಪೀಳಿಗೆಗೂ ಮುಂದುವರಿಯುತ್ತದೆ. ಈ ಯೋಜನೆಯನ್ನು ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಮುಂದಿನ ವರ್ಷದಿಂದಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಜಯಚಾಮರಾಜ ಒಡೆಯರ್ ಮಹಾನ್ ವಾಗ್ಗೇಯಕಾರರಾಗಿದ್ದರು. ಹೀಗಾಗಿ ಈ ನೆಲದಲ್ಲಿ ಅನೇಕ ಸಂಗೀತ ದಿಗ್ಗಜರು ಜನ್ಮ ತಾಳಿದ್ದಾರೆ. ತನ್ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಮಳವನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀ ಸಂಗೀತ ಪ್ರಕಾರಗಳನ್ನು ಆಧುನಿಕವಾಗಿ ಅರ್ಥೈಸುವುದು, ಪ್ರಸಿದ್ಧ ಮತ್ತು ಉದಯೋನ್ಮುಖ ಪ್ರತಿಭೆಯನ್ನು ಪರಿಚಯಿಸುವುದಲ್ಲದೆ, ಈ ಕ್ಷೇತ್ರಕ್ಕೆ ಹೊಸ ಪ್ರೇಕ್ಷಕರನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಮುಖ ನಗರಗಳನ್ನು ಸಾಂಸ್ಕೃತಿಕ, ಕಲಾತ್ಮಕವಾಗಿ ಸಂಘಟಿಸುವ ದೂರದೃಷ್ಟಿ ಹೊಂದಿದ್ದಾರೆ. ಇದರ ಭಾಗವಾಗಿ ಕರ್ನಾಟಕದಲ್ಲಿ ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ಮಾದರಿ ಕಾರ್ಯಕ್ರಮವನ್ನು ಮುಂದಿನ ವರ್ಷ ಕೇರಳ ರಾಜ್ಯದಲ್ಲಿ ಆಯೋಜಿಸಲು ನಮಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಮೈಸೂರು ಪ್ರವಾಸೋದ್ಯಮದ ನೆಲೆಯಾಗಿದ್ದರೂ, ದಕ್ಷಿಣ ಭಾರತದ ಸಾಂಸ್ಕೃತಿಕ ಪ್ರಪಂಚಕ್ಕೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡಿದೆ. ಇತಿಹಾಸವನ್ನು ಗಮನಿಸಿದರೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪೋಷಿಸಿದ ಪ್ರಮುಖ ಕೇಂದ್ರವಾಗಿದೆ. ಪ್ರವಾಸೋದ್ಯಮ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಸಂಗೀತ -ನಾಟಕ ಅಕಾಡೆಮಿ ಸೇರಿದಂತೆ ನಾನಾ ಇಲಾಖೆಗಳು ಸೇರಿ ಆಯೋಜಿಸುತ್ತಿರುವ ಈ ಕಾರ್ಯಕ್ರಮದಿಂದ ದಾಸ ಪರಂಪರೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತಷ್ಟು ಜನರನ್ನು ತಲುಪುತ್ತದೆ. ಅಲ್ಲದೆ ತಮಿಳುನಾಡಿನಲ್ಲಿ ನಡೆದ ‘ತಿರುವಯ್ಯರು ಸಂಗೀತ ಹಬ್ಬ’ ಕಾರ್ಯಕ್ರಮದ ಯಶಸ್ಸೇ ಈ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿದೆ ಎಂದರು.
ಕೇಂದ್ರದ ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ನಿರ್ದೇಶಕ ಡಿ.ವೆಂಕಟೇಶನ್, ಪ್ರಧಾನ ನಿರ್ದೇಶಕಿ ಮುಗ್ದಾ ಸಿನ್ಹಾ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಇತರರು ಇದ್ದರು