ಅಧಿಕಾರಿಗಳಿಗೆ ಕಂಟಕ: ಮತ್ತಷ್ಟು ಸಾಕ್ಷ್ಯ ಕಲೆಹಾಕುತ್ತಿರುವ ಸಿಬಿಐ, ವಿಚಾರಣೆ ಶೀಘ್ರ

IMA
Published on

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವ ಐಎಎಸ್, ಐಪಿಎಸ್ ಸೇರಿ 10ಕ್ಕೂ ಅಧಿಕ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆ ನಡೆಸಿರುವ ಸಿಬಿಐ, ಮತ್ತಷ್ಟು ಅಧಿಕಾರಿಗಳ ವಿರುದ್ಧ ಸಾಕ್ಷ್ಯ ಕಲೆ ಹಾಕುತ್ತಿದ್ದು ಸದ್ಯದಲ್ಲೇ ಅವರಿಗೂ ಕಂಟಕ ಎದುರಾಗಲಿದೆ. ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಸೇರಿ ಐವರು ಪೊಲೀಸರ ವಿರುದ್ಧ

ಎಫ್​ಐಆರ್ ದಾಖಲಿಸಿಕೊಂಡಿರುವ ಬೆನ್ನಲ್ಲೇ ಐಎಂಎ ಕಂಪನಿ ಮಾಲೀಕ ಮೊಹಮದ್ ಮನ್ಸೂರ್ ಖಾನ್​ನಿಂದ ಲಂಚ ಪಡೆದಿದ್ದಾರೆ ಎನ್ನಲಾದ ಇನ್ನಷ್ಟು ಅಧಿಕಾರಿಗಳ ವಿರುದ್ಧ ಸಿಬಿಐ ಸಾಕ್ಷ್ಯ ಕಲೆ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ವಿಚಾರಣೆ ಸಂದರ್ಭ ಮನ್ಸೂರ್ ಖಾನ್, ತನ್ನಿಂದ ಲಂಚ ಪಡೆದ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ. ಇದರಲ್ಲಿ ಕೆಲವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಉಳಿದವರ ವಿರುದ್ಧ ಸೂಕ್ತ ಸಾಕ್ಷ್ಯ ಸಿಕ್ಕ ಬಳಿಕ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ ಎನ್ನಲಾಗಿದೆ.

ಉಳಿದ ಆಸ್ತಿ ಬಗ್ಗೆ ಶೋಧ: ಮನ್ಸೂರ್ ಖಾನ್ ಗ್ರಾಹಕರಿಂದ ಪಡೆದಿದ್ದಾನೆ ಎನ್ನಲಾದ 2.5 ಸಾವಿರ ಕೋಟಿ ರೂ.ಗೂ ಅಧಿಕ ಹಣದಲ್ಲಿ 450 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಮಾತ್ರ ಜಪ್ತಿ ಮಾಡಲಾಗಿದೆ. ಉಳಿದ ಹಣ ಎಲ್ಲಿ ಹೂಡಿಕೆ ಮಾಡಿದ್ದಾನೆ ಎಂಬ ಬಗ್ಗೆ ಸಿಬಿಐ ಮಾಹಿತಿ ಕಲೆ ಹಾಕುತ್ತಿದೆ. ಆತನ ಹೇಳಿಕೆ ಪ್ರಕಾರ ಐಎಂಎ ಕಂಪನಿ ಆರಂಭಿಸಿದ ಬಳಿಕ ಮನ್ಸೂರ್ 150 ರಿಂದ 200 ಕೋಟಿ ರೂ.ವರೆಗೆ ಲಂಚ ನೀಡಿದ್ದಾನೆ ಎಂದು ಅಂದಾಜಿಸಲಾಗಿದೆ. ಕಂಪನಿಯ ಆಡಳಿತಾತ್ಮಕ ವೆಚ್ಚ ಈವರೆಗೆ 100 ಕೋಟಿ ರೂ. ಆಗಿದೆ. ಈಗಾಗಲೇ ಜಪ್ತಿ ಮಾಡಿರುವುದನ್ನು ಹೊರತುಪಡಿಸಿ, ಗ್ರಾಹಕರು ಹೂಡಿಕೆ ಮಾಡಿದ ಉಳಿದ ಹಣದ ಬಗ್ಗೆ ಸಿಬಿಐಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ಬಗ್ಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ. ಫಾರೆನ್ಸಿಕ್ ಆಡಿಟ್ ಸಂಸ್ಥೆ ಡೆಲೋಯಿಟ್​ಗೆ ಕಂಪನಿಯ ಆಸ್ತಿ-ಪಾಸ್ತಿ ದಾಖಲೆ ನೀಡಲಾಗಿದ್ದು, ಲೆಕ್ಕಪರಿಶೋಧನೆ ನಡೆಸುತ್ತಿದೆ. ಅದು ಮುಕ್ತಾಯಗೊಂಡ ಬಳಿಕ ಕಂಪನಿ ಹಣ ಎಲ್ಲಿ ಹೋಗಿದೆ? ಯಾರ ಖಾತೆಗಳಿಗೆ ಎಷ್ಟು ಹಣ ಜಮೆಯಾಗಿದೆ? ಎಂಬ ಅಂಶ ಬೆಳಕಿಗೆ ಬರಲಿದೆ. ಜಪ್ತಿ ಮಾಡಲಾದ ಕೆಲ ನಿವೇಶನ ಹಾಗೂ ಜಮೀನುಗಳು ಕಾನೂನು ಸಂಘರ್ಷದಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ ಅಂತ್ಯಕ್ಕೆ ತನಿಖೆ ಅಂತಿಮ?: ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಇತರ ಆರೋಪಿಗಳ ಮನೆಯಲ್ಲಿ ಪತ್ತೆಯಾದ ಪೆನ್​ಡ್ರೖೆವ್, ಕಂಪ್ಯೂಟರ್​ನಲ್ಲಿ ದೊರೆತ ಕೆಲ ದಾಖಲೆ ಪರಿಶೀಲಿಸಲಾಗುತ್ತಿದೆ. ಮನ್ಸೂರ್​ನಿಂದ ಇವರು ಲಂಚ ಪಡೆದಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯದ ಹುಡುಕಾಟದಲ್ಲಿ ಸಿಬಿಐ ನಿರತವಾಗಿದೆ. ಮಾರ್ಚ್ ಅಂತ್ಯದಲ್ಲಿ ಈ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬರಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಮನ್ಸೂರ್ ಪರ ವರದಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಇತ್ತೀಚೆಗೆ ಐವರು ಪೊಲೀಸರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿತ್ತು.

150 ಕೋಟಿ ರೂ. ಚಿನ್ನ ಖರೀದಿ

ಕೆಲ ವರ್ಷಗಳ ಹಿಂದೆ ಮನ್ಸೂರ್ ಮುಕ್ತ ಮಾರುಕಟ್ಟೆಯಲ್ಲಿ 150 ಕೋಟಿ ರೂ. ಮೌಲ್ಯದ ಅಸಲಿ ಚಿನ್ನಾಭರಣ ಖರೀದಿಸಿ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡಿದ್ದ. ಕಡಿಮೆ ಬೆಲೆಗೆ ಚಿನ್ನಾಭರಣ ನೀಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಗ್ರಾಹಕರು, ಈತನ ಕಂಪನಿಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಮನ್ಸೂರ್ ನಡೆಸಿದ್ದ ಹಲವು ಕಸರತ್ತುಗಳಲ್ಲಿ ಇದೂ ಒಂದು. ಇದರಿಂದ ಕಂಪನಿಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದ್ದರೂ, ಗ್ರಾಹಕರ ವಿಶ್ವಾಸ ಗಳಿಸಿದರೆ ಮುಂದಿನ ದಿನಗಳಲ್ಲಿ ಇದರ ದುಪ್ಪಟ್ಟು ಹಣ ಸಂಪಾದಿಸಬಹುದು ಎಂದು ಭಾವಿಸಿ ಈ ಕೆಲಸಕ್ಕೆ ಕೈ ಹಾಕಿದ್ದ ವಿಚಾರ ಸಿಬಿಐ ಮೂಲಗಳಿಂದ ತಿಳಿದು ಬಂದಿದೆ.

| ಅವಿನಾಶ ಮೂಡಂಬಿಕಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net