

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ನೀಡಿದಂತೆ ನೀವೂ ಪ್ಯಾಕೇಜ್ ನೀಡಿ ಎಂದು ಕೆಲ ವಿದ್ಯಾವಂತರು ಕೇಳಿದ್ದರು. ನಾನು ಸೋಲುತ್ತೇನೆಯೋ ಹೊರತು ಲಜ್ಜೆಗೆಟ್ಟ ಚುನಾವಣೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಹೇಳಿದರು.
ಚುನಾವಣೆಯ ಸೋಲು ಸ್ವೀಕರಿಸಿದ್ದೇನೆ. ನನಗೆ ನಿರಾಸೆ ಆಗಿಲ್ಲ, ಧೃತಿಗೆಟ್ಟಿಲ್ಲ. ಮತ ಹಾಕುವುದಕ್ಕೂ ಹಣ ಪಡೆದ ನೌಕರರು (ಅತಿಥಿ ಉಪನ್ಯಾಸಕರು) ಮಕ್ಕಳಿಗೆ ಏನು ಬೋಧನೆ ಮಾಡುವರು ಎಂಬುದು ನನ್ನ ಯಕ್ಷ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಅವರು ಒಪಿಎಸ್ ಪ್ರಸ್ತಾವನೆಯೇ ಇಲ್ಲ ಎಂದಿದ್ದರು. ಒಪಿಎಸ್ ಜಾರಿಗೆ ತರುತ್ತೇವೆಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಕಾಂಗ್ರೆಸ್‌ಗೆ ಮತಗಳು ಬಂದಿಲ್ಲ. ಇದನ್ನು ಗಮನಿಸಿದರೆ ನೌಕರರು ಒಪಿಎಸ್ ಬೇಡ ಎಂಬ ತೀರ್ಮಾನ ಮಾಡಿದಂತಿದೆ. ಜತೆಗೆ ನಿವೃತ್ತರ ಬಗ್ಗೆ ಹೋರಾಟ ಮಾಡುವುದು ಬೇಡವೆಂಬ ಸಂದೇಶ ಕೊಟ್ಟಿದ್ದಾರೆ. ರಾಜಕೀಯದಲ್ಲಿ ನಾನು ಪದವೀಧರರು ಮತ್ತು ನೌಕರರ ಆಯ್ಕೆಯನ್ನು ಪ್ರಶ್ನೆ ಮಾಡುವುದಿಲ್ಲ. ಒಟ್ಟಾರೆ ಅವರ ನಿರ್ಧಾರ ಸರಿಯೋ ತಪ್ಪೋ ಎಂಬ ಗೊಂದಲ ಇದೆ ಎಂದರು.