

ಹಿರಿಕರ ರವಿ ಸೋಮವಾರಪೇಟೆ
ಪಟ್ಟಣ ಪಂಚಾಯಿತಿ ೪ನೇ ವಾರ್ಡ್‌ನಲ್ಲಿ ಹಾವುಗಳು ನಿವಾಸಿಗಳ ನೆಮ್ಮದಿಯನ್ನು ಕೆಡಿಸಿವೆ ಎಂದು ನಿವಾಸಿಗಳು ಅಸಮಧಾನ ವ್ಯಕ್ತಪಡಿಸಿದರು. ವಿಜಯವಾಣಿ ವಾರ್ಡ್‌ವಾಚ್ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ತಾವು ಅನುಭವಿಸುತ್ತಿರುವ ಸಮಸ್ಯೆ ಹೇಳಿಕೊಂಡರು.
ವಾರ್ಡ್‌ನ ಕುವೆಂಪು ಬಡಾವಣೆಯ ಕೆಳಭಾಗದಲ್ಲಿ ಅನೇಕರು ಸೈಟ್ ಕೊಂಡು ಬೇಲಿ ಹಾಕಿ ಬಿಟ್ಟಿದ್ದಾರೆ. ಸೈಟ್‌ನಲ್ಲಿ ಕಾಡು ಬೆಳೆದ ಪರಿಣಾಮ ಹಾವುಗಳು ಮನೆಯ ಆವರಣ ಪ್ರವೇಶಿಸುತ್ತವೆ ಎಂದು ಹೇಳಿದರು. ಈ ಬಗ್ಗೆ ಕ್ರಮಕ್ಕಾಗಿ ಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸೈಟ್ ಮಾಲೀಕರು ಕಾಡು ಕಡಿದು ಸ್ವಚ್ಚಗೊಳಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು.
ಕುವೆಂಪು ಬಡಾವಣೆಯಲ್ಲಿ ರಸ್ತೆ ಕುಸಿಯುವ ಭೀತಿಯೂ ಇದೆ. ಮಹಿಳಾ ಸಮಾಜದಿಂದ ಹರಿಯುವ ನೀರು ನೇರವಾಗಿ ೪ನೇ ವಾರ್ಡ್‌ನ ಚರಂಡಿಯಲ್ಲಿ ಹರಿಯುತ್ತದೆ. ಮಣ್ಣು ಸಡಿಲಗೊಳ್ಳುತ್ತಿರುವ ಪರಿಣಾಮ ಮನೆಗಳಿಗೆ ಅಪಾಯವಾಗುವ ಆತಂಕವನ್ನು ಕೆಲ ನಿವಾಸಿಗಳು ವ್ಯಕ್ತಪಡಿಸಿದರು.
ಕೆಲವು ಕಡೆ ಚರಂಡಿ ವ್ಯವಸ್ಥೆಯಾಗಬೇಕು. ಸ್ಲ್ಯಾಬ್ ಅಳವಡಿಬೇಕು. ೩೦ ಮಂದಿ ನಿವೇಶನ ರಹಿತರಿದ್ದು, ಉಚಿತ ನಿವೇಶನಗಳನ್ನು ಹಂಚಬೇಕು. ಮಳೆಗಾಲದಲ್ಲಿ ೧೨ ಮನೆಗಳು ಬೀಳುವ ಹಂತದಲ್ಲಿದ್ದು, ಪಂಚಾಯಿತಿ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಹೇಳಿಕೊಂಡರು. ಕೆಲ ಮನೆಗಳ ಮುಂದೆ ಒಣ ಮರಗಳಿದ್ದು, ಅವುಗಳನ್ನು ತೆರವು ಮಾಡುತ್ತಿಲ್ಲ. ಜನರು ಸ್ವಚ್ಚತೆಗೆ ಹೆಚ್ಚಿನ ಅಧ್ಯತೆ ನೀಡಬೇಕು. ಬೀದಿ ದೀಪದ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ನಿವಾಸಿಗಳು ಹೇಳಿದರು.
ಸರ್ಕಾರದ ನಿಯಮದಂತೆ ೭೦೦ ಮಂದಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೬೭೦೦ ಜನಸಂಖ್ಯೆಯಿದೆ. ೯ ಜನ ಪೌರಕಾರ್ಮಿಕರು ಸೇವೆಯಲ್ಲಿ ಇರಬಹುದು. ಈ ಕಾರಣದಿಂದ ಪಂಚಾಯಿತಿಗೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಹೆಚ್ಚಿನ ಪೌರಕಾರ್ಮಿಕರನ್ನು ನೇಮಕ ಮಾಡಿದರೆ ಒಳ್ಳೆಯದು ಎಂದು ವಾರ್ಡ್ ಸದಸ್ಯ ಬಿ.ಸಂಜೀವ, ನಿವಾಸಿಗಳಿಗೆ ಮನವರಿಕೆ ಮಾಡಿಕೊಟ್ಟರು.
**
೪ನೇ ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ೬೦ಲಕ್ಷ ರೂ.ಗಳಷ್ಟು ಹಣವನ್ನು ವಿನಿಯೋಗಿಸಲಾಗಿದೆ. ೨ ತಡೆಗೋಡೆ ನಿರ್ಮಿಸಲಾಗಿದೆ. ಬಿಎಸ್‌ಎನ್‌ಎಲ್ ರಸ್ತೆ, ಮಹಿಳಾ ಸಮಾಜ ರಸ್ತೆ, ಕುವೆಂಪು ಬಡಾವಣೆ, ಫಾರೆಸ್ಟ್ ಆಫೀಸ್ ರಸ್ತೆ ಸೇರಿದಂತೆ ವಾರ್ಡ್‌ನ ಎಲ್ಲಾ ರಸ್ತೆಗಳು ಡಾಮರೀಕರಣಗೊಂಡಿವೆ. ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ೫ ಎಕರೆ ಜಾಗವನ್ನು ಗುರುತಿಸಿ, ಶಾಸಕರ ಗಮನಕ್ಕೆ ತಂದಿದ್ದೇವೆ. ಅನುದಾನ ಒದಗಿಸಲು ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ. ಬಿ.ಸಂಜೀವ, ವಾರ್ಡ್ ಸದಸ್ಯ.
**
ವಾರ್ಡ್‌ನಲ್ಲಿ ಕಿರಿದಾದ ರಸ್ತೆಗಳಿದ್ದು, ರಸ್ತೆ ಬದಿಯಲ್ಲೇ ವಿದ್ಯುತ್ ಕಂಬಗಳು ಬಿದ್ದಿವೆ. ಕಂಬಗಳನ್ನು ತೆರವು ಮಾಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಕ್ರಮಕೈಗೊಂಡಿಲ್ಲ. ಕೂಡಲೆ ತೆರವು ಮಾಡಬೇಕು. ಮಳೆಯಿಂದ ಮನೆಗಳಿಗೆ ಹಾನಿಯಾಗುತ್ತಿದ್ದು, ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಾಚಪ್ಪ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ.
**
ಕೆಲವು ಕಡೆ ಚರಂಡಿಗೆ ಸ್ಲ್ಯಾಬ್ ಹಾಕಬೇಕು. ಪ್ರತಿದಿನ ಬೀದಿದೀಪ ಉರಿಯುವಂತೆ ನೋಡಿಕೊಳ್ಳಬೇಕು. ಹಾವುಗಳ ಕಾಟವಿರುವುದರಿಂದ ರಸ್ತೆಯಲ್ಲಿ ಬೆಳಕು ಇದ್ದರೆ, ದಾರಿಹೋಕರಿಗೆ ಉಪಯೋಗವಾಗಲಿದೆ. ಎಸ್.ಈ. ಸತೀಶ್, ವ್ಯಾಪಾರಿ, ೪ನೇ ವಾರ್ಡ್.
**
ಮನೆಯ ಪಕ್ಕದ ರಸ್ತೆಯೇ ಕುಸಿಯುವ ಹಂತದಲ್ಲಿದೆ. ರಾತ್ರಿ ನಿದ್ದೆ ಮಾಡಲು ಭಯವಾಗುತ್ತಿದೆ. ಕುವೆಂಪು ಬಡಾವಣೆಯ ತಿರುವಿನಲ್ಲಿ ಗುಣಮಟ್ಟದ ಮೋರಿ ನಿರ್ಮಾಣ ಮಾಡಬೇಕು. ರಸ್ತೆಯನ್ನು ಮುಂದುವರಿಸಬೇಕು. ಪಂಚಾಯಿತಿ ಕೂಡಲೆ ಅನುದಾನ ಕಲ್ಪಿಸಬೇಕು. ಬಿ.ಆರ್. ಚಂದನ, ವಾರ್ಡ್ ನಿವಾಸಿ.
**
ಜೋರಾಗಿ ಮಳೆ ಸುರಿದರೆ ಚರಂಡಿ ಉಕ್ಕಿ ಹರಿಯುತ್ತದೆ. ಮನೆಯ ಕಾಂಪೌಂಡ್ ಕೂಡ ಕುಸಿಯುವ ಆತಂಕವಿದೆ. ಮೋರಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಬೇಕು. ಕಮಲಾಕ್ಷ ಬಲ್ಯಾಯ, ನಿವೃತ್ತ ಪ್ರಾಧ್ಯಾಪಕರು, ವಾರ್ಡ್ ನಿವಾಸಿ.
**
ರಸ್ತೆಗೆ ತಡೆಗೋಡೆ ನಿರ್ಮಿಸಿದರೆ ಮಾತ್ರ ರಸ್ತೆ ಉಳಿಯುತ್ತದೆ. ಕೂಡಲೆ ತಡೆಗೋಡೆ ಕಾಮಗಾರಿ ಪ್ರಾರಂಭಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಬೇಕು. ಸಿದ್ದುಪಾರಪ್ಪ, ನಿವೃತ್ತ ಲೈನ್‌ಮನ್, ವಾರ್ಡ್ ನಿವಾಸಿ.