

ಹಿರಿಕರ ರವಿ ಸೋಮವಾರಪೇಟೆ
ಅತೀ ಹೆಚ್ಚು ಆದಾಯ ಮೂಲ ಹೊಂದಿರುವ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨ನೇ ವಾರ್ಡ್‌ನ ಕುವೆಂಪು ರಸ್ತೆಯ ನಿವಾಸಿಗಳು ಪ್ರತಿದಿನ ಜೀವಭಯದಿಂದ ಬದುಕುವಂತಾಗಿದೆ.
ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ೨ನೇ ವಾರ್ಡ್‌ನಲ್ಲಿ ಗುರುವಾರ ಆಯೋಜಿಸಿದ್ದ ಕ್ಷೇತ್ರ ಸಂಚಾರ ಕಾರ್ಯಕ್ರಮದಲ್ಲಿ ಬಡವರು, ವೃದ್ಧರು ಹಾಗೂ ಮಕ್ಕಳು ತಮ್ಮ ನೋವನ್ನು ತೋಡಿಕೊಂಡರು.
ಮನೆಯಲ್ಲಿ ವೃದ್ಧರನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗಬೇಕು. ಬಿರುಕು ಬಿಟ್ಟಿರುವ ಗೋಡೆ ಕುಸಿಯುವ ಆತಂಕ ಇದ್ದೆ ಇರುತ್ತದೆ. ಗೋಡೆ ಕುಸಿದು ಮರಣ ಹೊಂದಿದ ಮೇಲೆ ಪರಿಹಾರ ಕೊಡುವುದಕ್ಕಿಂತ, ತಡೆಗೋಡೆ ಕಟ್ಟಿ ಮನೆಗಳು ಹಾಗೂ ಜೀವ ಉಳಿಸಿಕೊಡಿ ಎಂದು ಬೇಡಿಕೊಂಡರು.
ಕುವೆಂಪು ರಸ್ತೆಯ ಐಸಮ್ಮ ಮನೆಯಿಂದ, ತಮಿಳರ ಬೀದಿಗಾಗಿ ಕಮಲ ಅವರ ಮನೆಯವರೆಗೆ ೩೦ ಮನೆಗಳು ಕುಸಿಯುವ ಭೀತಿಯಲ್ಲಿವೆ. ಮುಂದಿನ ಮಳೆಗಾಲದಲ್ಲಿ ಅನೇಕ ಮನೆ ನೆಲಸಮವಾಗುವ ಮುನ್ಸೂಚನೆ ಇದೆ. ದಿನದಿಂದ ದಿನಕ್ಕೆ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ನಿವಾಸಿಗಳು ಆತಂಕ ವ್ಯಕ್ತ ಪಡಿಸಿದರು.
೨೦೧೮ ರಲ್ಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ. ಕುವೆಂಪು ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಕಳೆದ ೪ ವರ್ಷಗಳಿಂದ ಎಷ್ಟೇ ಬೇಡಿಕೆಯಿಟ್ಟರೂ ತಡೆಗೋಡೆ ನಿರ್ಮಿಸುತ್ತಿಲ್ಲ. ವರ್ಷವರ್ಷ ಬರೆ ಕುಸಿಯುತ್ತಲೆ ಇದೆ. ಅರ್ಜಿ ಕೊಟ್ಟಾಗ ಪಿಡಿಒ, ತಾಲೂಕು ಕಚೇರಿ ಸಿಬ್ಬಂದಿ ಫೋಟೊ ತೆಗದುಕೊಂಡು ಹೋಗುತ್ತಿದ್ದಾರೆ. ಯಾವುದೇ ಪರಿಹಾರವಾಗಲಿ, ತಡೆಗೋಡೆಯ ನ್ನಾಗಲಿ ನಿರ್ಮಿಸಿಕೊಡುತ್ತಿಲ್ಲ ಎಂದು ನಿವಾಸಿಗಳು ನೋವು ತೋಡಿಕೊಂಡರು.
ಜಿಲ್ಲಾಧಿಕಾರಿ ಹಾಗು ಜನಪ್ರತಿನಿಧಿಗಳು ೨ನೇ ವಾರ್ಡ್‌ಗೆ ಬಂದು ಗ್ರಾಮ ವಾಸ್ತವ್ಯ ಮಾಡಬೇಕು. ಕುಸಿಯುವ ಹಂತದಲ್ಲಿರುವ ಮನೆ ಯಲ್ಲಿ ಒಂದು ರಾತ್ರಿ ತಂಗಬೇಕು. ಮಲಗುವುದಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇವೆಂದು ನಿವಾಸಿಗಳು ಸವಾಲು ಹಾಕಿದರು.
ಲೀಲಮ್ಮ ಎಂಬ ೭೫ ವರ್ಷದ ವೃದ್ಧೆ ಮನೆ ಬಿರುಕು ಬಿಟ್ಟು, ಗೋಡೆ ವಾಲಿವೆ. ಒಂಟಿಯಾಗಿರುವ ವೃದ್ದೆ ಮಲಗಿದ ಸಂದರ್ಭದಲ್ಲಿ ಮನೆ ಕುಸಿದರೆ, ಭೂಸಮಾಧಿಯಾಗುವುದು ಗ್ಯಾರೆಂಟಿ. ಇಂತಹ ಅನಾಹುತಗಳಿಗೆ ಜಿಲ್ಲಾಧಿಕಾರಿ ಹಾಗು ಚೌಡ್ಲು ಪಂಚಾಯಿತಿ ನೇರ ಹೊಣೆಯಾಗುತ್ತದೆ ಎಂದು ಸ್ಥಳಿಯ ನಿವಾಸಿಗಳು ಎಚ್ಚರಿಕೆ ನೀಡಿದರು.
ಪ್ರಭಾವಿಗಳು, ಶ್ರೀಮಂತರ ಮನೆಗಳ ಮುಂದೆ, ೩೦-೪೦ ಲಕ್ಷ ರೂ.ವೆಚ್ಚದ ತಡೆಗೋಡೆ ನಿರ್ಮಾಣವಾಗುತ್ತಿವೆ. ಆದರೆ, ಕುಸಿಯುವ ಹಂತದಲ್ಲಿರುವ ಬಡವರ ಮನೆಗಳ ಹಿಂಭಾಗ ತಡೆಗೋಡೆ ಕಟ್ಟಲು ಸಾಧ್ಯವಿಲ್ಲ ಎಂಬುದೇ ದುರಂತ. ೨೦೧೮ ರಲ್ಲಿ ಶಾಂತಿ ಎಂಬವರ ಮನೆ ನೆಲಸಮವಾಯಿತು. ಪಂಚಾಯಿತಿವರು ಇದುವರಗೆ ಹೊಸ ಮನೆ ನಿರ್ಮಿಸಿಕೊಟ್ಟಿಲ್ಲ. ಹಕ್ಕುಪತ್ರವಿದೆ. ಈಗ ಬಾಡಿಗೆ ಮನೆ ಯಲ್ಲಿ ವಾಸವಿದ್ದಾರೆ. ವರ್ಷಕ್ಕೆ ನಾಲ್ಕೈದು ಅರ್ಜಿಕೊಟ್ಟರು ಪಂಚಾಯಿತಿ ಮನೆ ನಿರ್ಮಿಸಿಕೊಡುವ ಮಾನವೀಯತೆ ತೋರಿಸಿಲ್ಲ.
ಲಕ್ಷ್ಮೀ, ಪಾರ್ವತಿ, ಸಾವಿತ್ರಿ, ಮಲ್ಲೇಸ್ ಎಂಬುವರು ಇಲ್ಲೇ ಹುಟ್ಟಿ ಬೆಳೆದವರು. ಹಲವು ದಶಕಗಳಿಂದ ಮುರುಕಲು ಮನೆಯಲ್ಲಿ ವಾಸವಿದ್ದಾರೆ. ಕುಟುಂಬದಲ್ಲಿ ಶಾಲಾ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿದ್ದಾರೆ. ಮೇಲ್ಛಾವಣಿಗೆ ಟಾರ್ಪಲ್ ಹಾಸಿಕೊಂಡು ದಿನ ದೂಡುತ್ತಿದ್ದಾರೆ. ಮಳೆಗಾಲದಲ್ಲಿ ಮನೆ ಸೋರುತ್ತದೆ. ಮನೆಯೊಳಗೆ ನೀರು ಸಂಗ್ರಹವಾಗುವುದರಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿ
ಲ್ಲ ಎಂದು ನೋವು ತೋಡಿಕೊಂಡರು.
ಠಿಡಿಸರ್ಕಾರಿ ಪ್ರಾಥಮಿಕ ಶಾಲೆಯ ರಸ್ತೆಯೂ ಗುಂಡಿ ಬಿದ್ದಿದೆ. ಕೆಲ ಭಾಗದಲ್ಲಿ ಸರಿಯಲ್ಲಿದ ಕಾರಣ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಒಟ್ಟಿನಲ್ಲಿ ೨ನೇ ವಾರ್ಡ್‌ನ ಕುವೆಂಪು ರಸ್ತೆ ಪಕ್ಕದ ಮನೆಗಳ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸದಿದ್ದರೆ ಅನಾಹುತ ಗ್ಯಾರಂಟಿ ಎಂಬಂತಾಗಿದೆ.
**
ಕೂಲಿ ಮಾಡಿಯೇ ಜೀವನ ಸಾಗಿಸಬೇಕು. ೨೦೧೮ ರಲ್ಲಿ ಮನೆ ಸಂಪೂರ್ಣ ನೆಲಸಮವಾಗಿದೆ. ವಸತಿ ಯೋಜನೆಯಲ್ಲಿ ಪಂಚಾಯಿತಿ ಮನೆ ಕೊಟ್ಟಿಲ್ಲ. ಯಾರನ್ನು ಬೇಡಿಕೊಂಡರು ಪ್ರಯೋಜವಾಗುತ್ತಿಲ್ಲ. ಎರಡು ಹೆಣ್ಣು ಮಕ್ಕಳು ಮದುವೆಯಾಗಿ ಹೋಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನ್ಯಾಯ ಒದಗಿಸಿಕೊಡಬೇಕು. ಶಾಂತಿ, ೨ನೇ ವಾರ್ಡ್ ನಿವಾಸಿ.
**
ನಾವು ಇಲ್ಲೇ ಹುಟ್ಟಿ ಬೆಳೆದವರು. ಎಲ್ಲಿಂದಲೋ ಬಂದವರಿಗೆ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡುತ್ತಾರೆ. ನಾವು ಮುರುಕು ಮನೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಬದುಕುವುದು. ಮಳೆಗಾಲದಲ್ಲಿ ಮನೆ ಕುಸಿಯುವ ಆತಂಕವಿದೆ.
ಸಾವಿತ್ರಿ, ಸಾಂದೀಪನಿ ಶಾಲೆ ಸಮೀಪ, ೨ನೇ ವಾರ್ಡ್ ನಿವಾಸಿ.
**
ಶಾಸಕರು. ಜಿಲ್ಲಾಧಿಕಾರಿಗಳು ಬರಬೇಕು. ಮನೆ ಹಿಂಭಾಗ ಬರೆ ಕುಸಿಯುತ್ತಿರುವುದರಿಂದ ಗೋಡೆ ಬಿರುಕು ಬಿಟ್ಟಿವೆ. ಕಳೆದ ೫ ವರ್ಷ ಗಳಿಂದ ತಡೆಗೋಡೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರೂ ಪಂಚಾಯಿತಿ ಕ್ರಮಕೈಗೊಳ್ಳುತ್ತಿಲ್ಲ. ಭಯದಲ್ಲೇ ಜೀವನ ಸಾಗಿಸುತ್ತಿ
ದ್ದೇವೆ. ಮಮತಾ ಫಾನ್ಸಿಸ್, ಕುವೆಂಪು ರಸ್ತೆ ನಿವಾಸಿ, ೨ನೇ ವಾರ್ಡ್.
**
ಮನೆ ಬಿರುಕು ಬಿಟ್ಟು, ಗೋಡೆ ಕುಸಿಯುವ ಆತಂಕದಲ್ಲಿದ್ದೇವೆ. ಅಪಾಯದ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಿವುದು ಬಿಟ್ಟು, ಶ್ರೀಮಂತರ ಮನೆ ಪಕ್ಕದಲ್ಲೇ ತಡೆಗೋಡೆ ನಿರ್ಮಿಸುತ್ತಿದ್ದಾರೆ. ವಿವೇಕಾನಂದ ಸರ್ಕಲ್ ಸಮೀಪ ೩೫ ಲಕ್ಷ ರೂ. ಖರ್ಚು ಮಾಡಿ ತಡೆಗೋಡೆ ನಿರ್ಮಿಸಿದ್ದಾರೆ. ಅಲೆಕಟ್ಟೆ ರಸ್ತೆಯಲ್ಲಿ ೨ ಕಡೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಬಡವರ ರೋಧನೆ ಜನಪ್ರತಿನಿಧಿಗಳಿಗೆ ಕೇಳಿಸುವುದಿಲ್ಲವೆ. ಜೀವ ಹಾನಿಯಾದರೆ ಪಂಚಾಯಿತಿ ಅಡಳಿತವೇ ಹೊಣೆ. ಅನಿಲ್, ೨ನೇ ವಾರ್ಡ್ ನಿವಾಸಿ.
**
ನನಗೆ ೮೦ ವರ್ಷ ವಯಸ್ಸು. ನಡೆದಾಡುವುದೇ ಕಷ್ಟ. ನನ್ನ ಒಬ್ಬಳನ್ನೇ ಮಲಗಿಸಿ ಮಗ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಎಲ್ಲಾ ಗೋಡೆ ಬಿರುಕುಬಿಟ್ಟಿವೆ. ಮನೆ ಹಿಂಭಾಗದಲ್ಲಿ ಮಳೆ ಬಂದರೆ ಕುಸಿಯುವ ಭಯವಿದೆ. ಕೊನೆಗಾಲದಲ್ಲಿ ಭಯದಿಂದ ಬದುಕಬೇಕು. ಏಕೆ ತಡೆಗೋಡೆ ಕಟ್ಟುತ್ತಿಲ್ಲ. ಮನೆ ಕಟ್ಟಿಕೊಡುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ತುಂಬಾ ನೋವಾಗುತ್ತಿದೆ. ವೃದ್ಧರ ಜೀವಕ್ಕೆ ಬೆಲೆಯಿಲ್ಲವೆ.
ಬಾಲಮಣಿ, ೨ನೇ ವಾರ್ಡ್ ನಿವಾಸಿ.
**
ಗದ್ದೆಮನೆ ರಸ್ತೆಯಲ್ಲಿ ಬರೆ ಕುಸಿಯುವ ಭೀತಿಯಿದೆ. ೩೦ ವರ್ಷ ಹಿಂದೆ ರಸ್ತೆ ಡಾಮರೀಕರಣವಾಗಿದ್ದು ಬಿಟ್ಟರೆ, ಇದುವರೆಗೆ ರಸ್ತೆ ಡಾಮರೀಕರಣಗೊಂಡಿಲ್ಲ. ಏನೇ ಸಮಸ್ಯೆಯಾದರೂ ಆಟೋಗಳು ಬರುತಿಲ್ಲ. ಮಳೆಗಾಲದಲ್ಲಿ ರಸ್ತೆ ಹೊಂಡಮಯವಾಗುವುದರಿಂದ ಮಕ್ಕಳನ್ನು ಎತ್ತಿಕೊಂಡು ಹೋಗಬೇಕು. ರಸ್ತೆಗೆ ಏಕೇ ಹಣ ಕೊಡುತ್ತಿಲ್ಲ. ಸುನಂದ, ೧ನೇ ವಾರ್ಡ್ ನಿವಾಸಿ.
**
ಮನೆಗಳು ಬಿದ್ದು ಜೀವಹಾನಿ ಆದ ಮೇಲೆ ಪರಿಹಾರ ಕೊಡುವ ಬದಲು, ಜಿಲ್ಲಾಧಿಕಾರಿ ಕೂಡಲೆ ಭೇಟಿ ನೀಡಿ, ಜನರ ಕಷ್ಟ ಕೇಳಿ ಅನುದಾನ ಕಲ್ಪಿಸಬೇಕು. ಶ್ರೀಮಂತರ ಮನೆ ಮುಂದೆ ತಡೆಗೋಡೆ ಕಟ್ಟುತ್ತಾರೆ. ನಾನು ವಿಪಕ್ಷದ ಸದಸ್ಯ ಎಂದು ನನ್ನ ಮಾತಿಗೆ ಬೆಲೆ ಕೊಡುತ್ತಿಲ್ಲ. ಬಡವರ ನೋವು ಕೇಳಬೇಕು. ಕುವೆಂಪು ರಸ್ತೆಯಲ್ಲಿ ತಡೆಗೋಡೆಗೆ ಅನುದಾನ ಕಲ್ಪಿಸದಿದ್ದರೆ, ೩೦ ಬಡವರ ಮನೆಗಳಿಗೆ ಹಾನಿಯಾಗಲಿದೆ. ಸಿ.ಬಿ. ಸುರೇಶ್‌ಶೆಟ್ಟಿ, ೨ನೇ ವಾರ್ಡ್ ಸದಸ್ಯ.
**
೧೫ನೇ ಹಣಕಾಸು ಯೋಜನೆಯಲ್ಲಿ ಬರುವ ಹಣವನ್ನು ಎಲ್ಲಾ ವಾರ್ಡ್‌ಗಳ ಕಾಮಗಾರಿಗೆ ಸಮಾನವಾಗಿ ಹಂಚಲಾಗುತ್ತದೆ. ಅಭಿವೃದ್ಧಿ ಕಾಮಗಾರಿ ನಡೆದಿವೆ. ಇನ್ನೂ ಆಗಬೇಕಿದೆ. ನರೇಗಾದಲ್ಲಿ ಕೆಲವೊಂದು ನಿಯಮ ಪಾಲಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ೨ನೇ ವಾರ್ಡ್‌ನಲ್ಲಿ ತಡೆಗೋಡೆ ಮಾಡಬೇಕು. ಹೆಚ್ಚಿನ ಹಣ ಬೇಕು. ಜಿಲ್ಲಾ ಪಂಚಾಯಿತಿಗೆ ಶಿಫಾರಸ್ಸು ಮಾಡಲಾಗಿದೆ. ಪಿ.ಎಂ. ಗಣಪತಿ, ಅಧ್ಯಕ್ಷರು, ಚೌಡ್ಲು ಗ್ರಾಮ ಪಂಚಾಯಿತಿ.
**
೨ನೇ ವಾರ್ಡ್‌ನಲ್ಲಿ ಶೇ.೭೦ ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿವೆ. ಶೇ.೩೦ ರಷ್ಟು ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಯ ಬೇಕಿದೆ. ಅಂತಹ ಕಾಮಗಾರಿಗಳಿಗೂ ಕ್ರೀಯಾಯೋಜನೆ ಮಾಡಲಾಗಿದೆ. ವಾರ್ಡ್‌ನಲ್ಲಿ ೯೫ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ೫೦ ಜನವರಿಗೆ ಹಕ್ಕುಪತ್ರ ನೀಡಬೇಕಾಗಿದೆ. ಪ್ರವೀಣ್, ೨ನೇ ವಾರ್ಡ್ ಸದಸ್ಯ.
**
ಬಹುತೇಕ ಅಭಿವೃದ್ಧಿ ಕಾಮಗಾರಿ ನಡೆದಿವೆ. ಉಳಿದ ಕಾಮಗಾರಿಗಳಿಗೆ ಅನುದಾನ ಕಲ್ಪಿಸಲು ಶಾಸಕರು ಭರವಸೆ ನೀಡಿದ್ದಾರೆ. ಪ್ರಾಥಮಿಕ ಶಾಲಾ ರಸ್ತೆಯನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ. ತಡೆಗೋಡೆ ಬೇಡಿಕೆ ಈಡೇರಿಸಲಾಗುವುದು. ಜಯಲಕ್ಷ್ಮೀ ಸುಬ್ರಮಣಿ, ವಾರ್ಡ್ ಸದಸ್ಯೆ.