

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಪ್ರೌಢಶಾಲೆಗಳ ಪೈಕಿ ತಾನು ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲೆಯಲ್ಲಿ ಅತ್ಯುತ್ತಮ ವಿಜ್ಞಾನ ಪ್ರಯೋಗಾಲ ಹಾಗೂ ಮಾದರಿ ಗ್ರಂಥಾಲಯ ಸ್ಥಾಪಿಸಿಸಿರುವ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಎಸ್.ಎಂ. ಇಬ್ರಾಹಿಂ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಕ್ಕಳಿಗೆ ಆಸಕ್ತಿದಾಯವಾಗಿ ಕಲಿಸುವ ಉದ್ದೇಶದಿಂದ ಸರ್ಕಾರದ ಅನುದಾನ ಹಾಗೂ ದಾನಿಗಳ ಸಹಕಾರದಿಂದ ಸತತ ಪ್ರಯತ್ನದ ಫಲ ವಾಗಿ ನೇರುಗಳಲೆ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಅದೇ ರೀತಿ ಜಿಲ್ಲೆಗೆ ಮಾದರಿಯಾಗಿರುವ ಗ್ರಂಥಾಲಯ ಸ್ಥಾಪನೆಯ ಪ್ರಮುಖ ರೂವಾರಿಯಾಗಿದ್ದಾರೆ.
ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಮಾದರಿ ಗ್ರಂಥಾಲಯ ಸ್ಥಾಪಿಸಲಾಗಿದೆ. ೨ ಸಾವಿರಕ್ಕಿಂತ ಹೆಚ್ಚು ಪುಸ್ತಕ ಇರುವ ಈ ಶಾಲೆಯ ಗ್ರಂಥಾಲಯ ಇತರೆ ಪ್ರೌಢಶಾಲೆಯ ಗ್ರಂಥಾಲಯಕ್ಕಿಂತ ವಿಭಿನ್ನವಾಗಿದೆ. ಕೇವಲ ಪುಸ್ತಕ ಮಾತ್ರ ಇಲ್ಲಿ ಲಭ್ಯವಿಲ್ಲ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಉಪಕಾರವಾಗುವ ರೀತಿಯಲ್ಲಿ ಗ್ರಂಥಾಲಯದ ಗೋಡೆಯಲ್ಲಿ ಅಭ್ಯಾಸ ವಿಷಯಗಳ ಮಾಹಿತಿ ಹಾಕಿರುವುದು ವಿಶೇಷ.
ಮಾದರಿಯಾಗಿರುವ ವಿಜ್ಞಾನ ಪ್ರಯೋಗಾಲಯ- ಗ್ರಂಥಾಲಯ ವೀಕ್ಷಣೆಗೆ ಕೊಡಗು ಮತ್ತು ಇತರೆ ಜಿಲ್ಲೆಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ವಿಜ್ಞಾನ ಶಿಕ್ಷಕರಾಗಿರುವ ಇವರು ಕೇವಲ ವಿಜ್ಞಾನ ವಿಭಾಗ ಮಾತ್ರವಲ್ಲದೆ ಇತರ ಬೋಧನಾ ವಿಷಯ ಗಳಲ್ಲೂ ತಮ್ಮ ನೈಪುಣ್ಯತೆ ಪ್ರದರ್ಶಿಸಿದ್ದಾರೆ. ಇವರ ಸಹಕಾರದಿಂದ ಕೂಡಿಗೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಅತ್ಯಾಕರ್ಷಕವಾದ ಸಮಾಜ ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ. ಡಯಟ್‌ನಲ್ಲಿ ಕೊಡಗಿನ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಘಟಕ ನಿರ್ಮಾಣದಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
ತಾನು ಕರ್ತವ್ಯನಿರ್ವಹಿಸುತ್ತಿರುವ ಪ್ರೌಢಶಾಲೆಯನ್ನು ಕೊಡಗು ಜಿಲ್ಲೆಯಲ್ಲೇ ಅತ್ಯುತ್ತಮವಾದ ಶಾಲೆಯನ್ನಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇವರ ಪ್ರಯತ್ನದಿಂದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ಅತ್ಯುತ್ತಮವಾದ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಇಬ್ರಾಹಿಂ ಕಳೆದ ೧೪ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುತ್ತೂರಿನ ಕುಂಬ್ರ ನಿವಾಸಿ
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕುಂಬ್ರದ ಹಿರಿಯ ವರ್ತಕ ಮಹಮ್ಮದ್ ಶೇಖಮಲೆ- ಸಾರಮ್ಮ ದಂಪತಿ ದ್ವಿತೀಯ ಪುತ್ರ. ತನ್ನ ಪ್ರಾಥಮಿಕ ಶಿಕ್ಷಣವನ್ನು ಅರಿಯಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪೆರ್ನಾಜೆ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದರು.
ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಬಿಎಸ್ಸಿ ಪದವಿ ಶಿಕ್ಷಣವನ್ನು ಸುಳ್ಯದ ನೆಹರು ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಹಾಗೂ ಎಂಎಸ್ನಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮಾಡಿದರು. ಬಿಎಡ್ ಪದವಿಯನ್ನು ಚಿಕ್ಕಮಗಳೂರಿನ ಎಂಎಲ್‌ಎಂಎನ್ ಕಾಲೇಜಿನಲ್ಲಿ ಮಾಡಿದರು.
೨,೦೦೦ ರಿಂದ ೨,೦೦೮ ರವರೆಗೆ ಕಾಸರಗೋಡಿನ ಕುಂಬ್ಳೆ ಸಮೀಪವಿರುವ ಇಎಸ್‌ಎಸ್‌ಎ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಈ ಪ್ರೌಢಶಾಲೆಯಲ್ಲಿ ಒಂದು ಮಾದರಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು.
೨೦೦೮ನೇ ಇಸವಿ ಸೆಪ್ಟೆಂಬರ್ ತಿಂಗಳಿನಲ್ಲಿ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆ ಗೊಂಡರು. ಕಳೆದ ೧೪ ವರ್ಷದಿಂದ ಈ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೊಬ್ಬ ಕ್ರಿಯಾಶೀಲ ಶಿಕ್ಷಕರಾಗಿ ದ್ದಾರೆ.
ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿ
ಕಳೆದ ೧೦ ವರ್ಷದಿಂದ ಕೊಡಗು ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೌಢಶಾಲಾ ಶಿಕ್ಷಕರಿಗೆ ಉತ್ತಮ ತರಬೇತಿ ನೀಡುತ್ತಿದ್ದಾರೆ. ಇವರ ಸಾಧನೆ ಗುರುತಿಸಿ ೨೦೧೯-೨೦ನೇ ಸಾಲಿನಲ್ಲಿ ಕೊಡಗು ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಸಾಮಾಜಿಕ ಕಾರ್ಯ
ಕೇವಲ ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪರಿಸರ ಪ್ರೇಮಿಯಾಗಿರುವ ಇವರು ತನ್ನೂರಾದ ಕೆಯ್ಯೂರಿನಲ್ಲಿ ಪೊರ್ಲುದ ಕೆಯ್ಯೂರು ವಿಷನ್ ೨೦೨೫ ಎಂಬ ಸಂಘಟನೆಯಡಿ ಊರ ಪರಿಸರ ಪ್ರೇಮಿಗಳೊಂದಿಗೆ ಸೇರಿಕೊಂಡು ಕೆಯ್ಯೂರು ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಕಸಮುಕ್ತ ಗ್ರಾಮವನ್ನಾಗಿಸಲು ಮತ್ತು ಹಸಿರು ಗ್ರಾಮವನ್ನಾಗಿಸಲು ಜಾಗ ಮೂಡಿಸುವಲ್ಲಿ ಪ್ರೇರಣಾಶಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡದ ಯುವಕರಿಗೆ ಪ್ರೇರಕರಾಗಿ ಕೆಯ್ಯೂರು ಗ್ರಾಮದ ಮುಖ್ಯ ರಸ್ತೆಯ ಎರಡೂ ಕಡೆ ಸ್ವಚ್ಛಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡಿಸುತ್ತಾ ಬಂದಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಪುತ್ತೂರು ತಾಲೂಕಿನ ನಮ್ಮ ಸಂಸ್ಥೆ ಯಲ್ಲಿ ದಕ್ಷಿಣ ಕನ್ನಡ ಜ್ಲಿಗೆ ಮಾದರಿಯಾಗುವ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯ ನಿರ್ಮಿಸಲು ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
**
ನನಗೆ ರಾಜ್ಯಮಟ್ಟದ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು, ಸಹಪಾಠಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಊರಿನವರಿಗೆ ತುಂಬಾ ಖುಷಿಯಾಗಿದೆ. ಇವರಿಗೆಲ್ಲ ಖುಷಿಯಾಗಿರುವುದು ನನಗೆ ಸಂತೋಷ ತಂದಿದೆ. ನಾನು ಮಾಡಿರುವ ಕೆಲಸ ಗುರುತಿಸಲ್ಪಟ್ಟ ಸಮಾಧಾನವಿದೆ. ಎಸ್.ಎಂ. ಇಬ್ರಾಹಿಂ, ವಿಜ್ಞಾನ ಶಿಕ್ಷಕರು, ನೇರುಗಳಲೆ ಸರ್ಕಾರಿ ಪ್ರೌಢಶಾಲೆ.
**
ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ೧೪ ವರ್ಷದಿಂದ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಎಂ. ಇಬ್ರಾಹಿಂ ಒಬ್ಬ ಮಾದರಿ ಶಿಕ್ಷಕರಾಗಿದ್ದಾರೆ. ಸರಳ, ಸಜ್ಜನಿಕೆಯ ಇವರು ಕೊಡಗಿಗೆ ಮಾದರಿಯಾದ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಶಾಲೆಯಲ್ಲಿ ಸ್ಥಾಪಿಸಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಕೆ.ವಿ. ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಸೋಮವಾರಪೇಟೆ.