

ಮಡಿಕೇರಿ: ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ತೋಳೂರುಶೆಟ್ಟಳ್ಳಿಯ ಹರಪಳ್ಳಿಯಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಪುಷ್ಪಗಿರಿ ಬೆಟ್ಟದ ತಪ್ಪಲಿನ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿರುವ ಭೂಕುಸಿತದಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕಿಲೋಮೀಟರ್ ಗಟ್ಟಲೆ ಬೆಟ್ಟ ಜರಿದಿದೆ.
ಎಚ್.ಎಸ್. ಸೋಮಯ್ಯ ಅವರ ಮನೆ ಸಮೀಪದಲ್ಲಿಯೇ ಭೂಕುಸಿತ ಉಂಟಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಬೆಟ್ಟದಲ್ಲಿ ಕುಸಿತ ಉಂಟಾಗಿದೆ. ಬೆಟ್ಟದ ಮೇಲ್ಭಾಗದಲ್ಲೂ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ಸ್ಥಳದಲ್ಲಿರುವವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಹರಪಳ್ಳಿ ಗ್ರಾಮದಲ್ಲಿ ಅಪಾಯಕಾರಿ ಮಟ್ಟದಲ್ಲಿ ಭೂಕುಸಿತ ಉಂಟಾಗಿರುವುದನ್ನು ಸ್ಥಳೀಯರು ಅಚ್ಚರಿ ಹಾಗೂ ಕುತೂಹಲಭರಿತರಾಗಿ ವೀಕ್ಷಿಸುತ್ತಿದ್ದರು. ಭೂಕುಸಿತ ಉಂಟಾದ ಸ್ಥಳದಲ್ಲಿ ನೀರು ಹರಿದು ಹೋಗುತ್ತಿದೆ. ೨೦೧೮ ರಲ್ಲಿ ಕೊಡಗಿನಲ್ಲಿ ಉಂಟಾಗಿದ್ದ ದೊಡ್ಡ ಮಟ್ಟದ ಭೂಕುಸಿತ ನೆನೆಯುವಂತೆ ಮಾಡಿದೆ.