ಮುರುಕು ಮನೆಯಲ್ಲೇ ವಾಸಿಸುವ ದುರ್ಗತಿ

4spt10-
Published on

ಹಿರಿಕರ ರವಿ ಸೋಮವಾರಪೇಟೆ
ದೇಶ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಆದರೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಬಡಜನರಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಭಾವನೆ ಮೂಡುತ್ತಿದೆ. ಇವತ್ತಿಗೂ ಮುರುಕು ಮನೆಯಲ್ಲೇ ವಾಸಿಸುವಂತಹ ದುರ್ಗತಿ ಬಂದಿದೆ ಎಂದು ಹೊನವಳ್ಳಿ ಗ್ರಾಮದ ಹಿರಿಯರು ತಮ್ಮ ಬದುಕಿನ ಚಿತ್ರಣ ತೆರೆದಿಟ್ಟರು.


ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ’ಕ್ಷೇತ್ರ ಸಂಚಾರ’ ಕಾರ್ಯಕ್ರಮದಲ್ಲಿ ಬಡ ನಿವಾಸಿಗಳು ತಮ್ಮ ನೋವು ತೋಡಿಕೊಂಡರು. ೧೫ ದಿನಗಳ ಕಾಲ ಧಾರಾಕಾರ ಮಳೆ ಸುರಿಯಿತು. ಮನೆ ಹಿಂಬದಿಯ ಗೋಡೆ ಕುಸಿದಿದೆ. ಗೋಡೆಗಳು ಶಿಥಿಲಗೊಂಡಿವೆ. ಮನೆ ಕುಸಿಯುವ ಭಯದಲ್ಲೇ ರಾತ್ರಿ ನಿದ್ದೆ ಮಾಡಬೇಕೆಂದು ಅಸಹಾಯಕತೆ ವ್ಯಕ್ತ ಪಡಿಸಿದರು.


ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕಂದಾಯ ಗ್ರಾಮಗಳಿವೆ. ದೊಡ್ಡಹಣಕೋಡು ಕಂದಾಯ ಗ್ರಾಮದಲ್ಲಿ ಗೆಜ್ಜೆಹಣಕೋಡು, ಜೇನಿಗರಕೊಪ್ಪ, ಕೂಗೇಕೋಡಿ, ಹೊನವಳ್ಳಿ ಉಪಗ್ರಾಮಗಳಿವೆ. ಹೊನ್ನೆಹಣಕೋಡು ವ್ಯಾಪ್ತಿಯಲ್ಲಿ ದೊಡ್ಡಮಳ್ತೆ, ಸುಳಿಮಳ್ತೆ, ಹಾರೋಹಳ್ಳಿ, ಒಳಗುಂದ, ೨ನೇ ಚೌಡ್ಲು ಉಪಗ್ರಾಮಗಳಿವೆ. ಬಹುತೇಕ ಗ್ರಾಮೀಣ ರಸ್ತೆಗಳು ಗುಂಡಿಮಯವಾಗಿದೆ.


ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೫೦ ಪರಿಶಿಷ್ಟ ಜಾತಿ ಕುಟುಂಬ ವಾಸಿಯುತ್ತಿವೆ. ಶೇ.೯೯ರಷ್ಟು ಕುಟುಂಬಗಳು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ೧೨೦ ಕುಟುಂಬ ಮುರುಕು ಮನೆಯಲ್ಲೇ ಬದುಕುತ್ತಿದ್ದಾರೆ. ಮನೆಗಳ ಮೇಲೆ ಟಾರ್ಪಲ್ ಕಟ್ಟಿಕೊಂಡಿದ್ದಾರೆ. ಅನೇಕ ಮನೆ ಬೀಳುವ ಹಂತದಲ್ಲಿವೆ. ಕಳೆದ ೪ ವರ್ಷಗಳಿಂದ ವಸತಿ ಯೋಜನೆಯಲ್ಲಿ ಮನೆಗಳು ಬಂದಿಲ್ಲ. ಪ್ರಸಕ್ತ ವರ್ಷ ಎಸ್ಸಿ ೫, ಎಸ್ಟಿಗೆ ೨ ಮನೆ ಸಿಕ್ಕಿವೆ. ಉಳಿದವರ ಬದುಕು ಮೂರಾಬಟ್ಟಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಎಂ. ಗೋಪಾಲಕೃಷ್ಣ ಹೇಳುತ್ತಾರೆ.


ದೊಡ್ಡಮಳ್ತೆ ಅಂಬೇಡ್ಕರ್ ನಗರ ಅಭಿವೃದ್ದಿ ಆಗಿಲ್ಲ. ಹಾರೋಹಳ್ಳಿ ರಸ್ತೆ, ಮುಕ್ಕನಕಟ್ಟೆ, ದಬ್ಬೆಕೊಪ್ಪ ರಸ್ತೆಗಳ ಡಾಮರೀಕರಣ ಆಗಬೇಕೆಂದು ವಾರ್ಡ್ ಸದಸ್ಯ ಎಚ್.ಪಿ. ರುದ್ರಪ್ಪ ಹೇಳುತ್ತಾರೆ. ದೊಡ್ಡಹಣಕೋಡು ಮಾಟ್ನಳ್ಳಿ ರಸ್ತೆ, ಗೆಜ್ಜೆಹಣಕೋಡು, ದೊಡ್ಡಹಣಕೋಡು ರಸ್ತೆ, ಕಾಗಡೀಕಟ್ಟೆ ಬೈಪಾಸ್ ರಸ್ತೆ, ದೊಡ್ಡಹಣಕೋಡು ಸೇತುವೆ ರಸ್ತೆ ಗುಂಡಿಮಯವಾಗಿದ್ದು, ಸರ್ಕಾರ ಅನುದಾನ ನೀಡಬೇಕೆಂದು ಸದಸ್ಯ ಗೋಪಾಲಕೃಷ್ಣ ಹೇಳಿದರು.


ಸಬ್ಬನಕೊಪ್ಪ ರಸ್ತೆ ಹಾಳಾಗಿದೆ. ಹೊನವಳ್ಳಿ, ಎಸ್ಸಿ ಕಾಲನಿ ರಸ್ತೆ, ಹೊನವಳ್ಳಿ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ವಾಸಿಸುವುದಕ್ಕೆ ಗುಣಮಟ್ಟದ ಮನೆ ಬೇಕು. ಆದರೆ, ಪರಿಶಿಷ್ಟ ಜಾತಿಯವರ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ.


ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕಾಮಗಾರಿ ಕಳಪೆಯಾಗಿವೆ ಎಂಬ ಆರೋಪ ವ್ಯಕ್ತವಾಗಿದೆ. ಗ್ರಾಮೀಣ ರಸ್ತೆಗಳು ಪಾಳುಬಿದ್ದಿದ್ದು, ಸರ್ಕಾರ ವಿಶೇಷ ಅನುದಾನ ಬಿಡುಗಡೆಗೊಳಿಸಿದರೆ ಮಾತ್ರ ಅಭಿವೃದ್ಧಿ ಕಾಮಗಾರಿ ಕೈಗೊಳಬಹುದು. ವಸತಿ ಯೋಜನೆ ಯಲ್ಲಿ ಹೆಚ್ಚಿನ ಮನೆಗಳ ನಿರ್ಮಾಣವಾಗಬೇಕಿದೆ ಎಂಬ ಬೇಡಿಕೆ ವ್ಯಕ್ತವಾಯಿತು.

**
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡವರಿಗೆ ಮನೆಗಳು ಹಾಗು ಗ್ರಾಮೀಣ ರಸ್ತೆ ಡಾಮರೀಕರಣಕ್ಕೆ ಹೆಚ್ಚಿನ ಅನುದಾನ ಬೇಕಿದೆ. ೧೫ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ.೪೦ರಲ್ಲಿ ರಸ್ತೆ ಮತ್ತು ಬೀದಿದೀಪ ನಿರ್ವಹಣೆಗೆ ಮೀಸಲಿಡಬೇಕು. ಶೇ.೩೦ ನೈರ್ಮಲ್ಯ ಉಳಿದ ಶೇ.೩೦ನ್ನು ಕುಡಿಯುವ ನೀರಿಗೆ ನಿಯೋಗಿಸಬೇಕು. ನರೇಗಾದಲ್ಲಿ ಶೇ.೧೦ ರಷ್ಟನ್ನು ಕಾಂಕ್ರೀಟಿಕರಣಕ್ಕೆ ಉಪಯೋಗಿಸಬಹುದು. ಸರ್ಕಾರ ವಿಶೇಷ ಅನುದಾನ ನೀಡಿದರೆ ಒಂದಷ್ಟು ಸಮಸ್ಯೆ ಬಗೆಹರಿಸಬಹುದು. ಕೆ.ಎಂ. ಬಿಂದು, ಅಧ್ಯಕ್ಷರು, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ.

**
ಬಸವ ವಸತಿ ಯೋಜನೆಯಲ್ಲಿ ೨೦೨೧-೨೨ರಲ್ಲಿ ೩೦ ಮನೆ ಮಂಜೂರಾಗಿದೆ. ೨೦ ಮನೆ ಇತರೆ ಜನಾಂಗಕ್ಕೆ, ಪರಿಶಿಷ್ಟ ಜಾತಿಯವರಿಗೆ ೫ ಮನೆಗಳಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿವೆ. ನರೇಗಾದಲ್ಲಿ ಕಾಮಗಾರಿ ನಡೆದಿವೆ. ಚರಂಡಿ ದುರಸ್ತಿ ಮಾಡಲಾಗಿದೆ. ಬಡವರಿಗೆ ಮನೆಗಳಿಗೆ ಟಾರ್ಪಲ್ ವಿತರಿಸಲಾಗಿದೆ. ಕಸಲೇವಾರಿ ಘಟಕ ನಿರ್ಮಾಣವಾಗಿದೆ. ಎಚ್.ಎಸ್. ಹರೀಶ್, ಪಿಡಿಒ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ.
**
ಮಳೆಗಾಲದಲ್ಲಿ ಮನೆಗಳಲ್ಲಿ ಮಲಗಲು ಭಯವಾಗುತ್ತಿದೆ. ಗೋಡೆಗಳು ಶೀತದಿಂದ ಬೀಳುವ ಹಂತದಲ್ಲಿವೆ. ವಸತಿ ಯೋಜನೆಯಲ್ಲಿ ಮನೆ ನೀಡುವಂತೆ ಅರ್ಜಿ ಕೊಡುತ್ತಲೆ ಬರುತ್ತಿದ್ದೇವೆ. ನಮ್ಮ ಕಷ್ಟವನ್ನು ಕೇಳುವವರೆ ಇಲ್ಲದಂತಾಗಿದೆ. ಈರಮ್ಮ, ಗೃಹಿಣಿ, ಪರಿಶಿಷ್ಟ ಜಾತಿ ಕಾಲನಿ, ದೊಡ್ಡಹಣಕೋಡು.

**
ಕಳೆದೆರಡು ವರ್ಷದ ಹಿಂದೆಯೇ ಆಶ್ರಯ ಮನೆಗಾಗಿ ಪಂಚಾಯಿತಿಗೆ ಅರ್ಜಿ ಕೊಟ್ಟಿದ್ದೇನೆ. ಈಗ ಮನೆ ಬೀಳುವ ಹಂತದಲ್ಲಿದೆ. ಚಳಿ ಯಿಂದ ನನ್ನ ಆರೋಗ್ಯ ಸರಿಯಿಲ್ಲ. ಮಳೆ ಸುರಿದರೆ ಆತಂಕ ಸುರುವಾಗುತ್ತದೆ. ಭಯದಿಂದ ಬದುಕಲು ಕಷ್ಟವಾಗುತ್ತಿದೆ. ದೇವಕ್ಕಿ, ಕಾರ್ಮಿಕ ಮಹಿಳೆ, ಸುಳಿಮಳ್ತೆ ಗ್ರಾಮ.

**
ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮನೆಗಳ ಅವಶ್ಯಕತೆ ಹೆಚ್ಚಿದೆ. ಮಳೆಗಾಲದಲ್ಲಿ ಬದುಕಲು ಪರದಾಡುತ್ತಿದ್ದಾರೆ. ಮನೆಯ ಮೇಲ್ಛಾವಣಿಗೆ ಟಾರ್ಪಲ್ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿದೆ. ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಕೂಡಲೆ ಸರ್ಕಾರ ವಿಶೇಷ ಅನುದಾನ ಕಲ್ಪಿಸಬೇಕು. ಎಚ್.ಈ. ಶಂಕರ, ಸದಸ್ಯರು, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ.

**
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿ ಕಳಪೆಯಾಗಿವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಿಂದ ನಡೆಯುವ ಕಾಮಗಾರಿಗಳ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಯಾವುದೇ ಮಾತಿ ಇಲ್ಲ. ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸರ್ಕಾರದ ಹಣ ಪೋಲಾಗುತ್ತಿದೆ. ಪರಿಶಿಷ್ಟ ಜಾತಿಯವರಿಗೆ ಮನೆ ನಿರ್ಮಿಸಿಕೊಡುವುದಕ್ಕೆ ಹಣವಿಲ್ಲ. ಅವಶ್ಯಕತೆ ಇಲ್ಲದಿರುವುದಕ್ಕೆ ಹಣ ವ್ಯಯ ಮಾಡ ಲಾಗುತ್ತಿದೆ. ಗಾ್ರುೀಣ ಭಾಗದಲ್ಲಿ ಸರ್ಕಾರದ ಕೆರೆಗಳು ಒತ್ತುವರಿಯಾಗಿವೆ. ಡಿ.ಎಂ. ಗೋಪಾಲಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯರು,

**
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸರ್ಕಾರ ಒದಗಿಸಬೇಕು. ಜನರು ವಾರ್ಡ್ ಸದಸ್ಯರನ್ನು ಪ್ರಶ್ನೆ ಮಾಡುತ್ತಾರೆ. ದೊಡ್ಡಮಳ್ತೆ ಅಂಬೇಡ್ಕರ್ ನಗರ ಅಭಿವೃದ್ಧಿ ಆಗಬೇಕಿದೆ. ಗ್ರಾಮೀಣ ಸಂಪರ್ಕ ರಸ್ತೆಗಳು ಡಾಮರೀಕರಣವಾಗಬೇಕು. ಹೆಚ್ಚಿನ ಅನುದಾನ ಕ್ಕಾಗಿ ಶಾಸಕರಿಗೆ ಮನವಿ ಮಾಡಿಕೊಂಡಿದ್ದೇವೆ. ಎಚ್.ವಿ. ರುದ್ರಪ್ಪ, ಪಂಚಾಯಿತಿ ಸದಸ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net