ದಯಾಮರಣ ಕೋರಿ ರಾಜ್ಯಪಾಲರಿಗೆ ನಿವೃತ್ತ ಕೃಷಿ ಅಧಿಕಾರಿ ಎಚ್.ಜಿ. ಕುಟ್ಟಪ್ಪ ಪತ್ರ

16mdks5 - Copy
Published on

ವಿಜಯವಾಣಿ ಸುದ್ದಿಜಾಲ ಸೋಮವಾರಪೇಟೆ
ಚೌಡ್ಲು ಗ್ರಾಮದ ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಎಚ್.ಜಿ. ಕುಟ್ಟಪ್ಪ ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಚೌಡ್ಲು ಗ್ರಾಮದ ಮಂಜುನಾಥ ಅಟೋ ವರ್ಕ್ಸ್‌ನಿಂದ ಕಳೆದ ೫ ವಷದಿಂದ ತಮ್ಮ ಕುಟುಂಬಕ್ಕೆ ಮಾನಸಿಕ ಹಿಂಸೆಯಾಗಿದ್ದು, ಎಲ್ಲಿಯೂ ನ್ಯಾಯ ದೊರಕಿಲ್ಲ ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

೨೦೧೧ರಲ್ಲಿ ಕೃಷಿ ಇಲಾಖೆಯಿಂದ ನಿವೃತ್ತಿಯಾದ ಬಳಿಕ ಕುಟ್ಟಪ್ಪ, ಚೌಡ್ಲು ಗ್ರಾಮದ ತಮ್ಮ ಸ್ವಂತ ನಿವಾಸದಲ್ಲಿ ನೆಲೆಸಿದ್ದಾರೆ. ಮನೆ ಸಮೀಪ ದಲ್ಲೇ ಮಂಜುನಾಥ ಅಟೋ ವರ್ಕ್ಸ್ ಇದ್ದು, ತೀವ್ರ ಶಬ್ಧ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗ್ಯಾರೇಜ್ ಸಿಬ್ಬಂದಿ ತಮಗೆ ಜೀವ ಬೆದರಿಕೆವೊಡ್ಡಿದ್ದು, ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದಂತಾಗಿದೆ ಎಂದು ದೂರಿನಲ್ಲಿ ಗಮನ ಸೆಳೆದಿದ್ದಾರೆ.

ಗ್ಯಾರೇಜ್ ಸಿಬ್ಬಂದಿ ಬೆಳಗ್ಗಿನಿಂದ ತಡರಾತ್ರಿಯವರೆಗೂ ವಿಪರೀತ ಶಬ್ಧ ಮಾಡುತ್ತಾರೆ. ವಾಹನ ಸ್ಟಾರ್ಟ್ ಮಾಡಿ, ಬೇಕೆಂದೇ ರೈಸ್ ಮಾಡುವುದು, ಗ್ಯಾರೇಜ್ ತ್ಯಾಜ್ಯಗಳಿಗೆ ಬೇಕೆಂದೇ ಮನೆಯ ಸಮೀಪ ಬೆಂಕಿ ಹಾಕಿ ಹೊಗೆ ಎಬ್ಬಿಸುವಂತಹ ಕೃತ್ಯ ಮಾಡುತ್ತಿದ್ದಾರೆ. ಇದರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಮಾಲಿನ್ಯ ನಿಯಂತ್ರಣ
ಮಂಡಳಿ, ಚೌಡ್ಲು ಗ್ರಾಮ ಪಂಚಾಯಿತಿ, ಉಸ್ತುವಾರಿ ಸಚಿವರಾಗಿದ್ದ ಸಾ.ರಾ. ಮಹೇಶ್ ಅವರಿಗೆ ಲಿಖಿತ ದೂರನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಮಂಜುನಾಥ ಗ್ಯಾರೇಜ್, ಭೂ ಪರಿವರ್ತನೆ ಮಾಡದ ಹಿನ್ನೆಲೆಯಲ್ಲಿ ಚೌಡ್ಲು ಪಂಚಾಯಿತಿ ಗ್ಯಾರೇಜ್ನ ಲೈಸೆನ್ಸ್ ನವೀಕರಣಗೊಳಿಸುವುದಿಲ್ಲ. ಅಲ್ಲದೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯ ಸುಡುವುದರಿಂದ ವಾಯುಮಾಲಿನ್ಯವಾಗಿರುವುದನ್ನು ದೃಢೀಕರಿಸಿ ಗ್ರಾಮ ಪಂಚಾಯಿತಿಗೆ ವರದಿ ನೀಡಿದೆ. ಅಲ್ಲದೆ ಸೋಮವಾರಪೇಟೆ- ಶಾಂತಳ್ಳಿ ರಾಜ್ಯ ಹೆದ್ದಾರಿ ೮೫ರ ಬದಿಯಲ್ಲೇ ಗ್ಯಾರೇಜ್ ಇದ್ದು, ರಸದತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ವಾಹನಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡುತ್ತಿರುವ ಆರೋಪವಿದೆ.

ಈ ಎಲ್ಲಾ ಕಾರಣಗಳಿಂದಾಗಿ ಚೌಡ್ಲು ಗ್ರಾಮ ಪಂಚಾಯಿತಿ ಗ್ಯಾರೇಜ್ ಅನ್ನು ತೆರವುಗೊಳಿಸಲು ನಿರ್ಣಯಕೈಗೊಂಡು, ಗ್ಯಾರೇಜ್ ಸ್ಥಳಾಂತರಿಸಲು ೨೦೨೧ರ ಮಾರ್ಚ್‌ನಲ್ಲಿ ೩ ತಿಂಗಳು ಗಡುವು ನೀಡಿತ್ತು. ಈ ಗಡುವಿನ ವಿರುದ್ಧ ಗ್ಯಾರೇಜ್ ಮಾಲೀಕ ಮನೋಜ್ ಸೋಮವಾರಪೇಟೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಆದರೆ ನ್ಯಾಯಾಲಯ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದೂ ಸ್ಥಳೀಯ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ. ಈ ಸಂದರ್ಭ ಚೌಡ್ಲು ಪಂಚಾಯಿತಿ ಸರ್ವ ಸದಸ್ಯರು ಗ್ಯಾರೇಜ್ ತೆರವಿಗೆ ಮುಂದಾದಾಗ ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ತಡೆಯೊಡ್ಡಿದ್ದಾರೆ ಎಂದು ಕುಟ್ಟಪ್ಪ ದಂಪತಿ ಆರೋಪಿಸುತ್ತಾರೆ.

ತಮಗೆ ನ್ಯಾಯ ದೊರಕದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ದಯಾಮರಣ ನೀಡುವಂತೆ ಕುಟ್ಟಪ್ಪ ದಂಪತಿ
ಮನವಿ ಮಾಡಿದ್ದಾರೆ. ಜೀವನಪೂರ್ತಿ ಸರ್ಕಾರದ ಸೇವೆ ಮಾಡಿ, ನಿವೃತ್ತಿ ನಂತರ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ದಂತಾಗಿದೆ, ಹಾಗಾಗಿ ತಮಗೆ ದಯಾ ಮರಣ ನೀಡುವಂತೆ ಬೇಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net