

ಕಲಬುರಗಿ: ಮುಂಬೈ-ಸೋಲಾಪೂರ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಕಲಬುರಗಿ ವರೆಗೂ ವಿಸ್ತರಣೆ ಮಾಡಬೇಕೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ ಈ ಕುರಿತು ಪ್ರಕ್ರಿಯೆ ನಡೆದಿದೆ ಎಂದರು. ಇನ್ನು ಹೈದ್ರಾಬಾದ-ಚಿತ್ತಾಪುರ ಪ್ಯಾಸೆಂಜರ್ ರೈಲು ಕಲಬುರಗಿ ವರೆಗೆ ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಲಬುರಗಿ-ಬೆಂಗಳೂರು ಮತ್ತು ಬೀದರ-ದೆಹಲಿ ನಡುವೆ ಸ್ಲೀಪರ್ ರೈಲು, ಹೈದ್ರಾಬಾದ-ಬೀದರ-ಕಲಬುರಗಿ, ಬೆಂಗಳೂರು-ಮಂಗಳೂರು ಹಾಗೂ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಬೇಡಿಕೆ ಇದ್ದು, ಶೀಘ್ರವೇ ಕೇಂದ್ರದ ರೈಲ್ವೆ ಸಚಿವರು ಮತ್ತು ರೈಲ್ವೆ ಬೋರ್ಡ್ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಭೀಮಗೆ ನೀರು: ಬೇಸಿಗೆ ಸಂದರ್ಭದಲ್ಲಿ ಭೀಮಾ ನದಿಗೆ ಮಹಾರಾಷ್ಟçದಿಂದ ನೀರು ಹಂಚಿಕೆಗೆ ಪ್ರತಿ ವರ್ಷ ಕಲಬುರಗಿ-ಯಾದಗಿರಿ ಜಿಲ್ಲೆಗಳು ಕಸರತ್ತು ಮಾಡಬೇಕಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು 15 ಟಿ.ಎಂ.ಸಿ. ನೀರು ಮಹಾರಾಷ್ಟçದಿಂದ ಬಿಡಬೇಕು ಎಂಬ ಪತ್ರಕರ್ತರ ಪ್ರಶ್ನೆಗೆ ಕಾನೂನು ಬದ್ಧವಾಗಿ ಕುಡಿಯುವ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಗಳ ನಡುವೆ ಸಣ್ಣತನ ಪ್ರದರ್ಶನವನ್ನು ಕೇಂದ್ರ ಸರ್ಕಾರ ಸಹಿಸಲ್ಲ. ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ಜಲ ಶಕ್ತಿ ಖಾತೆಯ ಸಹಾಯಕ ಸಚಿವಾರು ಆಗಿರುವ ವಿ.ಸೋಮಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಮಾಜಿ ಸಂಸದ ಡಾ.ಉಮೇಶ ಜಾಧವ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಅಮರನಾಥ ಪಾಟೀಲ, ಸುಭಾಷ ಗುತ್ತೇದಾರ, ಸೋಲಾಪೂರ ರೈಲ್ವೆ ವಿಭಾಗದ ಡಿ.ಆರ್.ಎಂ. ಡಾಸುಜಿತ್ ಮಿಶ್ರಾ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.