ಅಧ್ಯಕ್ಷರಾಗಿ ಸೋಮಣ್ಣ, ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆ

22 HANUR 4
Published on

ಹನೂರು: ತಾಲೂಕಿನ ಮಂಗಲ ಗ್ರಾಮದ ಕಲ್ಪವೃಕ್ಷ ಕೋಳಿ ಸಾಕಣೆ ಹಾಗೂ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಸೋಮಣ್ಣ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ್ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ನೂತನವಾಗಿ ಆರಂಭವಾಗಿರುವ ಈ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಆದರೆ, ಎಲ್ಲರ ಸಹಮತದಿಂದ ಅಧ್ಯಕ್ಷರಾಗಿ ಎನ್. ಸೋಮಣ್ಣ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರ ಸ್ಥಾನಕ್ಕೆ ಡಿ. ವೀರಭದ್ರ, ಸಿ. ಮಹದೇವಸ್ವಾಮಿ, ಎಂ.ವಿ ವಿಶ್ವೇಶ್ವರಪ್ರಸಾದ್, ಜಿ. ಕನಕರಾಜು, ಕೆಂಪರಾಜು, ಮಲ್ಲಯ್ಯ, ನಿಂಗರಾಜು, ಎಸ್. ಮುರುಗೇಶ್, ಎನ್.ನವೀನ್, ಕೆ. ರಂಗಸ್ವಾಮಿ, ಮಮ್ತಾಜ್‌ಖಾನ್, ಅಂಜಲಿ, ನಿಂಗರಾಜಮ್ಮ, ಎನ್. ಸೋಮಣ್ಣ ಹಾಗೂ ವೆಂಕಟೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ನದೀಮ್ ಕಾರ್ಯನಿರ್ವಹಿಸಿದರು.

ಸಂಘದ ಅಭಿವೃದ್ಧಿಗೆ ಒತ್ತು: ಅಧ್ಯಕ್ಷ ಎನ್. ಸೋಮಣ್ಣ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಆದರೆ, ಆಸಕ್ತಿ ಇದ್ದರೂ ಕೋಳಿ ಸಾಕಣೆ ಹಾಗೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಸಹಕಾರ ಸಂಘವನ್ನು ಸ್ಥಾಪಿಸಲಾಗಿದ್ದು, ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ಸಂಘವು ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಆದ್ದರಿಂದ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇದರಿಂದ ಪ್ರತಿಯೊಬ್ಬರೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಕೋಳಿ ಸಾಕಣೆ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ಇದೀಗ ಅಸ್ತಿತ್ವಕ್ಕೆ ಬಂದಿರುವ ಸಹಕಾರ ಸಂಘ ಜನರ ಅನುಕೂಲ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net