

ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸೋಮಣ್ಣ ಆಯ್ಕೆಯಾದರು.
ತ್ರಿಪುರ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಚುನಾವಣೆ ನಿಗದಿಯಾಗಿತ್ತು. ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಹಾಗೂ ಬಸವರಾಜು ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಡುವೆಯೂ ಜಿದ್ದಾಜಿದ್ದಿ ಏರ್ಪಟ್ಟಿತ್ತು.
ಬಳಿಕ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 12 ಮತಗಳನ್ನು ಪಡೆದುಕೊಂಡ ಸೋಮಣ್ಣ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ, 10 ಮತಗಳನ್ನು ಪಡೆದ ಬಸವರಾಜು ಪರಾಭವಗೊಂಡರು. 1 ಮತ ಕುಲಗೆಟ್ಟಿತ್ತು. ಚುನಾವಣಾ ಅಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ಎಇಇ ಎಚ್.ಸಿ.ರತೀಶ್ ಕಾರ್ಯನಿರ್ವಹಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನೂತನ ಅಧ್ಯಕ್ಷರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಂಚಾಯಿತಿಯ 23 ಸದಸ್ಯರೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಹಿರಿಯ ಕಾಂಗ್ರೆಸ್ ಮುಖಂಡ, ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಹಿರಿಯೂರು ವೀರೇಂದ್ರ(ನವೀನ) ಮಾತನಾಡಿ, ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಮತ್ತು ಹಳ್ಳಿಗಾಡಿನ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧ್ಯಕ್ಷರಿಗೆ ಅವಕಾಶ ಸಿಕ್ಕಿದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ದುಡಿಯಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರುವ ಮೂಲಕ ಈ ಭಾಗದ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕೆಂದು ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಸಲಹೆ ನೀಡಿದರು.
ಉಪಾಧ್ಯಕ್ಷೆ ಪುಷ್ಪಾ ಶಂಕರ, ಸದಸ್ಯರಾದ ಅಶೋಕ, ಮಾಲತಿ, ಸುಶೀಲಾ, ಮಹದೇವಮ್ಮ, ಎಚ್.ಎಂ. ರೂಪಾವತಿ, ಜೆ.ಪ್ರದೀಪ್ ಕುಮಾರ್, ಮಾನಸ, ಎಚ್.ಎಂ. ಮನೋಜ್ ಕುಮಾರ್, ಸಿದ್ದಯ್ಯ, ಮೀನಾಕ್ಷಿ, ಎಂ.ಮೇಘಾ, ಎ.ಮಹೇಶ, ಆರ್.ರೇಖಾ, ಪಿ.ರೇವಣ್ಣ, ಎಂ.ನಳಿನ, ಕೃಷ್ಣ, ಸುವರ್ಣ, ಸಿ.ಎಂ. ಮನು ಕುಮಾರ, ಹಿರಿಯೂರು ಸೋಮಣ್ಣ, ಚಿಕ್ಕಮಾದಪ್ಪ, ಶಂಕರ, ಪೃಥ್ವಿ, ವಿ.ರವಿ, ಚೌಹಳ್ಳಿ ಮರಿಸ್ವಾಮಿ, ಮಲ್ಲೇಶ, ಸಿದ್ದರಾಜು, ನಿಲಸೋಗೆ ಪ್ರಸಾದ್, ಆಟೋ ಕುಮಾರ್, ಸೋಮಣ್ಣ, ಮ್ಯಾಜಿಕ್ ಸಿದ್ದರಾಜು, ಮಾದಾಪುರ ನಾಗರಾಜು, ಸಿ.ಬಿ ಹುಂಡಿ ಮಂಜು, ಹಿರಿಯೂರು ರಾಜೇಶ್ ಇತರರು ಇದ್ದರು.