

ಕೋಲಾರ: ತಾಲೂಕಿನ ಅರಾಭಿಕೊತ್ತನೂರು ಶ್ರೀಪ್ರಸನ್ನ ಸೋಮನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿದ್ದು, ಇದೇವೇಳೆ ಗ್ರಾಮ ಸಮೀಪದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿ ಭಯದ ವಾತಾವರಣ ಸೃಷ್ಟಿಸಿತ್ತು.
ಅರಣ್ಯ ಇಲಾಖೆಯ ನಿಬಂಧನೆಗಳಿಂದಾಗಿ ಗ್ರಾಮದಲ್ಲಿ ದಶಕಗಳ ಹಿಂದೆ ನಡೆಯುತ್ತಿದ್ದ ಚಿರತೆ ಮೆರವಣಿಗೆ ನಿಲ್ಲಿಸಲಾಗಿತ್ತಾದರೂ ರಥ ಎಳೆಯುವ ವೇಳೆಗೆ ಪಕ್ಕದ ಬೆಟ್ಟದಲ್ಲಿ ದಿಢೀರ್ ಚಿರತೆ ಪ್ರತ್ಯಕ್ಷವಾಯಿತು. ರಥವನ್ನು ಹೂವಿನ ಹಾರಗಳಿಂದ ಅಲಂಕರಿಸಿದ್ದು, ರಥ ಹೊರಡುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಹಣ್ಣು, ದವಳದ ಎಲೆ ರಥಕ್ಕೆ ಅರ್ಪಿಸಿದರು.
ಗ್ರಾಮದ ಸಮುದಾಯ ಭವನದಲ್ಲಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು. ದಾರಿಯುದ್ದಕ್ಕೂ ಸೇವಾಕರ್ತರು ಪಾನಕ, ಮಜ್ಜಿಗೆ, ಹೆಸರುಬೇಳೆ ವಿತರಿಸಿ ಭಕ್ತರ ದಾಹ ತೀರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಸೋಮನಾಥೇಶ್ವರ ಸ್ವಾಮಿ, ಲಕ್ಷಿ$್ಮವೆಂಕಟೇಶ್ವರ ಸ್ವಾಮಿ, ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ವಿದ್ಯಾಗಣಪತಿ, ಕರಗದಮ್ಮ, ರೇಣುಕಾ ಯಲ್ಲಮ್ಮ, ಶನೈಶ್ಚರಸ್ವಾಮಿ, ಪಟಾಲಮ್ಮ ದೇವಿ, ಕುಂಟಗಂಗಮ್ಮ, ಸಿದ್ದೇಶ್ವರ ಸ್ವಾಮಿ, ಸತ್ಯಮ್ಮದೇವಿ, ಭೀಮೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾತ್ರಿ ಕುರುಕ್ಷೇತ್ರ ನಾಟಕ ಪ್ರದರ್ಶನ ಹಾಗೂ ವಿವಿಧ ಸಾಂಸತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಅರ್ಚಕ ವೇದಬ್ರಹ್ಮ ಸತ್ಯಸೋಮಶೇಖರ್ ದೀಕ್ಷಿತ್ ಸೇರಿ ಸೋಮನಾಥೇಶ್ವರ ಅಭಿವೃದ್ಧಿ ಸಮಿತಿ ಸದಸ್ಯರು ರಥೋತ್ಸವದ ಉಸ್ತುವಾರಿ ವಹಿಸಿದ್ದರು. ರಥೋತ್ಸವಕ್ಕೆ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ಕುಮಾರ್, ವೇಣುಗೋಪಾಲಗೌಡ, ಉಪ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಚಾಲನೆ ನೀಡಿದರು. ಮಾಜಿ ಸಚಿವರಾದ ಶ್ರೀರಾಮುಲು, ವರ್ತೂರು ಪ್ರಕಾಶ್, ನಂದಿನಿ ಪ್ರವಿಣ್, ಆರ್.ಐ ಲೋಕೇಶ್, ಜಿಪಂ ಮಾಜಿ ಸದಸ್ಯೆ ರೂಪಶ್ರೀ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಉಪಾಧ್ಯಕ್ಷ ನಾಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ಎ.ಎಸ್.ನಂಜುಂಡೇಗೌಡ, ನಾರಾ ಯಣಸ್ವಾಮಿ, ಪ್ರಸನ್ನಕುಮಾರ್, ಕವಿತಾ, ನಾರಾಯಣಪ್ಪ, ನಾಗರಾಜ್, ಚಿಕ್ಕಚೆನ್ನಪ್ಪ, ಮಾಜಿ ಸದಸ್ಯ ಎ.ಶ್ರೀಧರ್, ಪಿಡಿಒ ಶಾಲಿನಿ, ಚೌಡದೇನಹಳ್ಳಿ ಚಂದ್ರಶೇಖರ್ ಇದ್ದರು.
ಚಿರತೆ ಬೇಟೆ ನಿಷೇಧ: ಸಂಕ್ರಾಂತಿಯನ್ನೇ ಆಚರಿಸದ ಗ್ರಾಮದ ಜನ ರಥಸಪ್ತಮಿಯ ರಥೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಗ್ರಾಮದ ಬೆಟ್ಟಗಳಲ್ಲಿರುವ ಚಿರತೆಯನ್ನು ಬೇಟೆಯಾಡಿ ಊರಿಗೆ ತಂದು, ಗ್ರಾಮದ ಮಧ್ಯಭಾಗದಲ್ಲಿ ಮೆರವಣಿಗೆ ಮಾಡಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದರು. ಆದರೆ ಬದಲಾದ ಪರಿಸ್ಥಿತಿ, ಸರ್ಕಾರ, ಅರಣ್ಯ ಇಲಾಖೆಯ ಕಾನೂನುಗಳಿಂದಾಗಿ ಚಿರತೆ ಬೇಟೆ ಕೈಬಿಟ್ಟು, ಸೋಮನಾಥೇಶ್ವರ ಸ್ವಾಮಿಯ ರಥೋತ್ಸವವನ್ನೇ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.