ಸಾರಿಗೆ ಬಸ್ಸುಗಳಲ್ಲಿ ಚಿಲ್ಲರೆ ಸಮಸ್ಯೆ ನಿವಾರಣೆ

bus
Published on

ಎನ್​.ಮುನಿವೆಂಕಟೇಗೌಡ, ಕೋಲಾರ

ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಚಿಲ್ಲರೆ ಸಮಸ್ಯೆ ಉಂಟಾಗದಂತೆ ಇಲಾಖೆ ಮುಂದಾಗಿದ್ದು, ಪ್ರಯಾಣಿಕರು ಇನ್ನು ಮುಂದೆ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್​ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲ ನಿರ್ವಾಹಕರಿಗೂ 730 ಇಟಿಎಂ ಯಂತ್ರಗಳನ್ನು ನೀಡಿದ್ದು, ಶೇ.8 ಬಸ್ಸುಗಳಲ್ಲಿ ಈಗಾಗಲೇ ಕಾರ್ಯಗತಗೊಂಡಿದೆ.

ಸರ್ಕಾರಿ ಬಸ್ಸುಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣಿಕರು ಹಾಗೂ ನಿರ್ವಾಹಕರ ಮಧ್ಯೆ ಆಗಾಗ ಗಲಾಟೆ, ಮಾತಿನ ಚಕಮಕಿ ನಡೆಯಲು ಕಾರಣವಾಗಿತ್ತು. ನಿರ್ವಾಹಕರು ಟಿಕೆಟ್​ ಹಿಂದೆ ಚಿಲ್ಲರೆ ಬರೆದು ಕೊಡುವುದು, ಇದನ್ನು ಪ್ರಯಾಣಿಕರು ವಿರೋಧಿಸುವುದು ನಡೆಯುತ್ತಿತ್ತು. ನಿರ್ವಾಹಕರು ಚಿಲ್ಲರೆ ಉಳಿಸಿಕೊಳ್ಳುವ ಸಲುವಾಗಿಯೇ ಟಿಕೆಟ್​ ಹಿಂದೆ ಚಿಲ್ಲರೆ ಬರೆದುಕೊಡುತ್ತಾರೆಂಬ ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಕರ್ನಾಟಕ ಸಾರಿಗೆ ಸಂಸ್ಥೆಯು ಕೋಲಾರ ಜಿಲ್ಲೆಯ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಚಿಲ್ಲರೆ ಸಮಸ್ಯೆಗೆ ಪೂರ್ಣ ತಿಲಾಂಜಲಿ ಹಾಡಲು ಮುಂದಾಗಿದ್ದು, ಕಳೆದ 20 ದಿನಗಳಿಂದ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್​ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ.

ರಾಜ್ಯ ಸಾರಿಗೆ ಸಂಸ್ಥೆಯು ಈ ಹಿಂದೆ ಟಿಕೆಟ್​ ಅನ್ನು ಹರಿದು ಕೊಡುವ ಪದ್ಧತಿಯಿಂದ ಯಂತ್ರದ ಮೂಲಕ ಟಿಕೆಟ್​ ನೀಡುವ ಪದ್ಧತಿ ಅಳವಡಿಸಿಕೊಂಡಿತ್ತು. ಇದೀಗ ಈ ಟಿಕೆಟ್​ ಯಂತ್ರದ ಬದಲಿಗೆ ಎಲೆಕ್ಟ್ರಾನಿಕ್​ ಟಿಕೆಟಿಂಗ್​ ಮಶಿನ್​ ಎಂಬ ಅತ್ಯಾಧುನಿಕ ಯಂತ್ರ ಬಳಸಲು ಸಂಸ್ಥೆ ಮುಂದಾಗಿದೆ. ಕೋಲಾರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನಿರ್ವಾಹಕರು ಹೊಸ ಯಂತ್ರದ ಮೂಲಕವೇ ಟಿಕೆಟ್​ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ನಿರ್ವಾಹಕರಿಗೆ ಈ ಕುರಿತು ಸೂಕ್ತ ತರಬೇತಿ ನೀಡಲಾಗಿದೆ.

ಯುಪಿಐ ಮೂಲಕ ಖರೀದಿ

ಹೊಸ ಎಲೆಕ್ಟ್ರಾನಿಕ್​ ಟಿಕೆಟಿಂಗ್​ ಮಿಷನ್​ನಲ್ಲಿ ಪ್ರಯಾಣಿಕರು ನಗದು ನೀಡುವುದರ ಜತೆಗೆ ಯುಪಿಐ ಯುನಿಫೈಡ್​ ಪೇಮೆಂಟ್​ ಇಂಟರ್​ಫೇಸ್​ ಮೂಲಕವೂ ಸಾರಿಗೆ ಸಂಸ್ಥೆಯ ಖಾತೆಗೆ ಹಣ ವರ್ಗಾಯಿಸಿ ಟಿಕೆಟ್​ ಖರೀದಿಸಲು ಅವಕಾಶವಿದೆ. ಈ ಸೌಲಭ್ಯದ ಮೂಲಕ ಪ್ರಯಾಣಿಕರು ಇಟಿಎಂ ಯಂತ್ರದಲ್ಲಿರುವ ಸಂಸ್ಥೆಯ ಯುಪಿಐ ಕೋಡ್​ ಅನ್ನು ಸ್ಕಾ$ನ್​ ಮಾಡುವ ಮೂಲಕ ಟಿಕೆಟ್​ ಮೊತ್ತವನ್ನು ಸಂಸ್ಥೆಗೆ ಪಾವತಿಸಿ ಟಿಕೆಟ್​ ಪಡೆದುಕೊಳ್ಳಬಹುದು. ನ.20 ರಿಂದಲೇ ಜಿಲ್ಲೆಯಾದ್ಯಂತ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಟಿಕೆಟ್​ ಖರೀದಿಸುತ್ತಿದ್ದಾರೆ.

ಶೇ.5 ಪಾವತಿ

ಪ್ರಸ್ತುತ ಕೋಲಾರ ಜಿಲ್ಲೆಯಿಂದ ಪ್ರತಿನಿತ್ಯ ಬರುತ್ತಿರುವ ಒಟ್ಟು ಆದಾಯದ ಶೇ.5 ಆದಾಯವು ಯುಪಿಐ ಸ್ಕಾ$ನ್​ ಮೂಲಕ ಸಾರಿಗೆ ಸಂಸ್ಥೆಯ ಖಾತೆಗೆ ನೇರವಾಗಿ ಪಾವತಿಯಾಗುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸ್ಥೆಯಿಂದ ಪ್ರಚಾರ

ಯುಪಿಐ ಪಾವತಿಸಿ ಟಿಕೆಟ್​ ಪಡೆದುಕೊಳ್ಳಬಹುದು ಎಂಬ ಬಗ್ಗೆ ಪ್ರಯಾಣಿಕರಿಗೆ ಪ್ರತಿ ಪ್ರಯಾಣದ ವೇಳೆಯೂ ಟಿಕೆಟ್​ ನೀಡುವಿಕೆ ಆರಂಭಿಸುವ ಮುನ್ನ ಬಸ್​ನಲ್ಲಿ ಘೋಷಣೆ ಹೊರಡಿಸುವಂತೆ ನಿರ್ವಾಹಕರಿಗೆ ತಿಳಿಸಲಾಗಿದೆ. ಇದರಿಂದ ಯುಪಿಐ ಪಾವತಿಗೆ ಪ್ರಯಾಣಿಕರು ಸಜ್ಜಾಗಲು ಸಹಕಾರಿಯಾಗುತ್ತಿದೆ. ಒಟ್ಟಾರೆ ಹಲವು ವರ್ಷಗಳಿಂದಲೂ ನಿರ್ವಾಹಕರು ಹಾಗೂ ಪ್ರಯಾಣಿಕರ ನಡುವೆ ತಗಾದೆಗೆ ಕಾರಣವಾಗುತ್ತಿದ್ದ ಚಿಲ್ಲರೆ ಸಮಸ್ಯೆಗೆ ಸಾರಿಗೆ ಸಂಸ್ಥೆಯು ಯುಪಿಐ ಮೂಲಕ ಪರಿಹಾರ ನೀಡಿದೆ.

"ಕರ್ನಾಟಕ ಸಾರಿಗೆ ಸಂಸ್ಥೆಯು ಜಿಲ್ಲೆಗೆ ಹೊಸದಾಗಿ 730 ಇಟಿಎಂ ಯಂತ್ರಗಳನ್ನು ತರಿಸಿ ನಿರ್ವಾಹಕರಿಗೆ ನೀಡಿದೆ. ಈ ಯಂತ್ರಗಳ ಮೂಲಕ ನಿರ್ವಾಹಕರು ಯುಪಿಐ ಕೋಡ್​ ತೋರಿಸಿ ಪ್ರಯಾಣಿಕರಿಂದ ಸ್ಕಾ$ನ್​ ಮಾಡಿಕೊಂಡು ಟಿಕೆಟ್​ ನೀಡಲು ಅವಕಾಶವಿದೆ. ಇದರಿಂದ ಈವರೆಗೂ ಕಾಡುತ್ತಿದ್ದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಸಂಸ್ಥೆಯ ಖಾತೆಗೆ ನೇರವಾಗಿ ಹಣವೂ ಜಮೆಯಾಗುತ್ತದೆ. ಇದೀಗ ಜಿಲ್ಲೆಯಲ್ಲಿ ಯುಪಿಐ ಮೂಲಕವೇ ಶೇ.8 ಟಿಕೆಟ್​ ಖರೀದಿಸುತ್ತಿದ್ದು, ಸಂಸ್ಥೆಗೆ ನೇರವಾಗಿ ಹಣ ಬರುತ್ತಿದೆ."

 -ಎನ್​.ಶ್ರೀನಾಥ್​, ವಿಭಾಗೀಯ ನಿಯಂತ್ರಣಾಕಾರಿ, ಸಾರಿಗೆ ಸಂಸ್ಥೆ ಕೋಲಾರ

"ಚಿಲ್ಲರೆ ಸಮಸ್ಯೆ ನಿವಾರಣೆಗೆ ರಾಜ್ಯ ರಸ್ತೆ ಸಾರಿಗೆ ಮುಂದಾಗಿರುವುದಕ್ಕೆ ಸ್ವಾಗತ. ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಆನ್​ಲೈನ್​ ವ್ಯವಹಾರದಲ್ಲಿ ತೊಡಗಿರುವುದರಿಂದ ಯುಪಿಐ ಮೂಲಕ ಟಿಕೆಟ್​ ಖರೀದಿಗೆ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯದು. ಇದರಿಂದ ನಿರ್ವಾಹಕ ಮತ್ತು ಸಾರ್ವಜನಿಕರ ಮಧ್ಯೆ ಚಿಲ್ಲರೆ ಸಮಸ್ಯೆ ನಿವಾರಣೆಯಾಗಿದೆ."

 -ನವೀನ್​, ಪ್ರಯಾಣಿಕ, ಕುಡುವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net