

ವಿಜಯಪುರ: ಜೀವನದಲ್ಲಿ ಹಲವು ಅಡೆತಡೆ ಮತ್ತು ಸಮಸ್ಯೆಗಳಿಗೆ ಪುಸ್ತಕಗಳ ಓದಿನಿಂದ ಪರಿಹಾರ ಸಿಗುತ್ತದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಸುಕುನ್ ಕಾಲನಿಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಚಿಲಿಪಿಲಿ ಮಕ್ಕಳ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಪುಸ್ತಕಗಳು ಜ್ಞಾನದ ತವರು. ಅವುಗಳ ಸಹವಾಸದಿಂದ ವಾಚಕನ ಅರಿವು ಹೆಚ್ಚಾಗುವ ಮೂಲಕ ಭವಿಷ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಂತಹ ಅಪರೂಪದ ಗ್ರಂಥಾಲಯದ ಸ್ಥಾಪನೆ ಮತ್ತು ನಿರ್ವಹಣಾ ಜವಾಬ್ದಾರಿ ಹೊತ್ತಿರುವ ಎನ್.ಎಂ. ಬಿರಾದಾರ ಕಾರ್ಯ ಶ್ಲಾನೀಯ ಎಂದರು.
ಎಕ್ಸಲಂಟ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚೇರ್ಮನ್ ಬಸವರಾಜ ಕೌಲಗಿ ಮಾತನಾಡಿ, ನಾಗರಿಕ ಯುಗದಲ್ಲಿ ಸಮಯದ ಸದುಪಯೋಗ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಪ್ರಬುದ್ಧ ಸಾಹಿತ್ಯದ ಅಧ್ಯಯನ ಅತ್ಯಂತ ಅವಶ್ಯಕ. ಹಲವು ಕಡೆ ಹರಿದು ಹಂಚಿಹೋಗಿರುವ ವ್ಯಕ್ತಿಯ ಅವಧಾನವನ್ನು ಕೇಂದ್ರೀಕರಿಸಿ ಮನಸನ್ನು ಸತ್ ಚಿಂತನೆಗಳತ್ತ ಕೊಂಡೊಯ್ಯುವ ಸಾಮರ್ಥ್ಯ ಇರುವುದು ಕೇವಲ ಪುಸ್ತಕಗಳಿಗಿದ್ದು, ಅವುಗಳ ಭಂಡಾರವೇ ಈ ಗ್ರಂಥಾಲಯಗಳು. ಅವುಗಳ ಮಹತ್ವ ನಾವೆಲ್ಲರೂ ಅರಿಯಬೇಕಿದೆ ಎಂದು ತಿಳಿಸಿದರು.
ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕಗಳು ಮಾನವನಿಗೆ ಜೀವನ ಮೌಲ್ಯ, ಬದುಕಿನ ಪಾಠ ಹಾಗೂ ಸಾಂತ್ವನದ ನಡೆ ಕಲಿಸುತ್ತದಲ್ಲದೆ, ಬದುಕಿನಲ್ಲಿ ಎದುರಾಗುವ ಆಕಸ್ಮಿಕ ಅಡೆತಡೆ ಮತ್ತು ತೊಂದರೆ ನಿವಾರಿಸುವ ಜತೆಗೆ ಸುಗಮವಾಗಿ ಮುನ್ನಡೆಯಲು ದಾರಿತೋರುತ್ತವೆ ಎಂದು ಹೇಳಿದರು.
ಶಿಕ್ಷಕ ಹಣಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ದೊಡ್ಡಮನಿ ನಿರೂಪಿಸದರು. ಗುರುನಾಥ ಗೊಂಗಡಿ ವಂದಿಸಿದರು. ರಾಜಶೇಖರ ಕೌಲಗಿ, ವಿಜಯಕುಮಾರ, ಸಿದ್ದಾಪುರ ಸರ್, ಎಂಟೆತ್ತ ಮತ್ತಿತರರಿದ್ದರು.