

ಹುಬ್ಬಳ್ಳಿ: ಡಾ. ರಘು ಅಕಮಂಚಿ ಒಬ್ಬ ಭಾಗ್ಯಶಾಲಿ ವ್ಯಕ್ತಿ. ಮನೆಯಿಂದ ಸಹಕಾರ ಇಲ್ಲದಿದ್ದರೆ ಸಾಮಾಜಿಕ ಕಾರ್ಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ರಘು ಅವರ ಸಾಧನೆಗೆ ಅವರ ತಂದೆ -ತಾಯಿ, ಮಡದಿ ಮತ್ತು ಮಕ್ಕಳೇ ಕಾರಣ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾ ಸಂಘಗಳ ವತಿಯಿಂದ ನಗರದ ಬಿವಿಬಿ ಕಾಲೇಜ್‌ನ ಬಯೋಟೆಕ್ ಅಡಿಟೋರಿಯಂನಲ್ಲಿ ಕೆಆರ್‌ಎಂಎಸ್‌ಎಸ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ರಘು ಅಕಮಂಚಿ ಅವರ ನಿವೃತ್ತಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಬಾಂಧವ್ಯ ಶಿಕ್ಷಕರ ಪರಿವಾರ ಮಿಲನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ ಸಂಘಕ್ಕೆ ಹೊಸ ರೂಪ ಕೊಟ್ಟವರು ಡಾ. ರಘು. ಶಿಕ್ಷಕರನ್ನು ರಾಷ್ಟ್ರಮಟ್ಟದಲ್ಲಿ ಜೋಡಿಸಿ ಅವರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಹೊಸ ವಿಚಾರಗಳ ಮೂಲಕ ಕಾರ್ಯಕರ್ತರನ್ನು ತಯಾರು ಮಾಡುವುದು ಮತ್ತು ನಿರಂತರವಾಗಿ ನಡೆಯುತ್ತಿರುವ ಶಿಕ್ಷಕ ಸಂಘದ ಅಭಿವೃದ್ಧಿ ಕಾರ್ಯದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಡಾ. ರಘು ಅವರು ಅನೇಕ ದುಂಡು ಮೇಜಿನ ಸಭೆ ಮತ್ತು ಅದಕ್ಕೆ ಸಲಹೆ -ಸೂಚನೆ ನೀಡಿದ್ದರು ಎಂದು ಸ್ಮರಿಸಿದರು.
ಎಬಿವಿಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಪಿ.ವಿ ಕೃಷ್ಣಭಟ್ ಮಾತನಾಡಿ, ಡಾ. ರಘು ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಅವರು ಕೈಗೊಂಡ ಪ್ರತಿ ಕಾರ್ಯದಲ್ಲೂ ಯಶಸ್ಸು ತರುವ ಛಾತಿ ರೂಢಿಸಿಕೊಂಡಿದ್ದಾರೆ ಎಂದರು.
ಕುಟುಂಬ, ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಆದರ್ಶ ಹೊಂದಿದವರು ಅವರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಡಾ. ರಘು ಅವರು ವಿದ್ಯಾರ್ಥಿ ಸಂಘಟನೆಗಳನ್ನು ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. ರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡ ಆಗುವುದರಲ್ಲಿ ಡಾ. ಅಕಮಂಚಿ ಅವರ ಪಾತ್ರ ಬಹಳಷ್ಟು ಇದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ, ಸಂಘದ ಹಿರಿಯರಾದ ಜಿ.ಆರ್. ಜಗದೀಶ, ಶ್ರೀಧರ ನಾಡಗೀರ, ಕೆಎಲ್‌ಇ ತಾಂತ್ರಿಕ ವಿವಿ ಉಪ ಕುಲಪತಿ ಡಾ. ಅಶೋಕ ಶೆಟ್ಟರ್, ಎಬಿಆರ್‌ಎಸ್‌ಎಂ ಸಹ ಸಂಘಟನಾ ಕಾರ್ಯದರ್ಶಿ ಜಿ. ಲಕ್ಷ್ಮಣ ಅವರು ಡಾ. ರಘು ಅಕಮಂಚಿ ಅವರ ವ್ಯಕ್ತಿತ್ವ ಕುರಿತು ಬಣ್ಣಿಸಿದರು.
ಪ್ರೊ. ಬಿ.ಕೆ. ತುಳಸಿಮಾಲಾ, ಡಾ.ಕೆ.ಬಿ. ಗುಡಸಿ, ಶಾಸಕ ಮಹೇಶ ಟೆಂಗಿನಕಾಯಿ, ಕೆಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ರವಿ ದಂಡಿನ, ಗೌರವಾಧ್ಯಕ್ಷ ಅರುಣ ಶಹಾಪೂರ, ಇತರರು ಇದ್ದರು.