

ವಿಜಯಪುರ: ಜಮೀನು ದಾರಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆ ಕಡೆಗಣಿಸುತ್ತಿರುವ ತಹಸೀಲ್ದಾರ್ರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ಗೆ ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ರೈತರು ಜಮೀನುಗಳಿಗೆ ದಾರಿ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದು ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿ ಒಂದು ವರ್ಷ ಸಮೀಪಿಸುತ್ತಿದ್ದರೂ ಯಾವೊಬ್ಬ ತಹಸೀಲ್ದಾರ್ ಕೂಡ ಸರ್ಕಾರದ ಸುತ್ತೋಲೆಯಂತೆ ದಾರಿ ಮಾಡಿಕೊಟ್ಟ ಉದಾಹರಣೆ ಇಲ್ಲ. ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ನಿಯಮ 59ರ ಅಡಿಯಲ್ಲಿ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಿದ್ದರೂ ತಹಸೀಲ್ದಾರ್ರು ದಾರಿಮಾಡಿಕೊಡುತ್ತಿಲ್ಲ ಎಂದರು.
ದಾರಿಗಾಗಿ ರೈತರು ಅರ್ಜಿ ಸಲ್ಲಿಸಿದರೆ ಅನವಶ್ಯಕವಾಗಿ ವಿಳಂಬ ನೀತಿ ಅನುಸರಿಸಲು ಸರ್ವೆ ಇಲಾಖೆಗೆ ಪತ್ರ ಬರೆಯುತ್ತಿದ್ದಾರೆ. ದಾರಿ ಇದೆಯೋ ಇಲ್ಲವೋ ಎಂಬುದನ್ನು ಸರ್ವೆ ಮಾಡಿ ವರದಿಕೊಡಿ ಎಂದು ಎಡಿಎಲ್ಆರ್ ಇವರಿಗೆ ಪತ್ರ ಬರೆಯುತ್ತಿದ್ದಾರೆ. ಭೂ ಮಾಪಕರು ಅಳತೆ ಮಾಡಿ ದಾರಿ ಇಲ್ಲವೆಂದು ತಹಸೀಲ್ದಾರ್ಗೆ ಪತ್ರ ಬರೆಯುತ್ತಾರೆ. ಅದರಂತೆ ತಹಸೀಲ್ದಾರ್ ಕೂಡ ದಾರಿಗಾಗಿ ಅರ್ಜಿ ಸಲ್ಲಿಸಿದ ರೈತರಿಗೆ ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲ ಎಂದು ಹಿಂಬರಹ ಕೊಡುತ್ತಾರೆ. ಸರ್ಕಾರ ಸುತ್ತೋಲೆ ಹೊರಡಿಸಿರುವುದು ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡಬೇಕೆಂದು ಅನುಭೋಗದ ಹಕ್ಕಿನ ಪ್ರಕಾರ ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಿದೆ. ನಕ್ಷೆಯಲ್ಲಿ ದಾರಿ ಇದ್ದರೆ ತಹಸೀಲ್ದಾರ್ಗೆ ಹೇಳುವ ಅವಶ್ಯಕತೆ ಏನು? ಎಂದರು.
ಬಹುತೇಕ ನಕ್ಷೆಗಳಲ್ಲಿ ಜಮೀನುಗಳಿಗೆ ಹೋಗಲು ದಾರಿಗಳ ಗುರುತೇ ಇಲ್ಲ. ಬ್ರಿಟಿಷರ ಕಾಲದಿಂದಲೂ ನಕ್ಷೆಯಲ್ಲಿ ದಾರಿಯನ್ನು ಗುರುತು ಮಾಡಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡ ರೈತರು ದಾರಿ ಕೊಡುತ್ತಿಲ್ಲ. ಸರ್ಕಾರದ ಸುತ್ತೋಲೆ ಪ್ರಕಾರ ದಾರಿ ಮಾಡಿಕೊಡದಿದ್ದರೆ ಹಿಂಬರಹ ಕೊಡಲಿ ಅದಕ್ಕೂ ಕೂಡ ತಹಸೀಲ್ದಾರ್ರು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ದಾರಿ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳಿಗೆ ಮನಸ್ಸಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಹಳ್ಳಿಗಳಲ್ಲಿ ದಾರಿಗಾಗಿ ರೈತರ ಮಧ್ಯೆ ಹೊಡೆದಾಟ ಮುಂದುವರೆದು ಕೊಲೆಗಳು ಆಗುವ ಸಂಭವವಿದೆ. ಈಗಾಗಲೇ ಕೆಲವೊಂದು ಭಾಗಗಳಲ್ಲಿ ಕೊಲೆಗಳು ಕೂಡ ನಡೆದಿವೆ. ಇಂತಹ ಗಂಭೀರವಾದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಸ್ಪಷ್ಟವಾದ ಆದೇಶವನ್ನು ಮತ್ತೊಮ್ಮೆ ಹೊರಡಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕು. ಮತ್ತು ದಾರಿ ವಿಷಯವಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದರು.
ಮುಖಂಡರಾದ ಸಂಗಪ್ಪ ಕ ಮನಗೂಳಿ, ರೇವಣೆಪ್ಪ ಕ. ಮನಗೂಳಿ, ಶರಣಪ್ಪ ಕ .ಮನಗೂಳಿ, ಬಸವರಾಜ ಗು. ಕುಂಬಾರ, ಮಾಚಪ್ಪ ಹೊರ್ತಿ, ಮೈಬೂಬ ಅವಟಿ, ಸಿದ್ದಪ್ಪ ಕಳಬೀಳಗಿ, ಪ್ರಭು ಬಸ್ತವಾಡ ಮತ್ತಿತರರಿದ್ದರು.