ಸ್ಮಶಾನ ಜಾಗದ ಸಮಸ್ಯೆ ಇತ್ಯರ್ಥಪಡಿಸಿ: ಭರತ್

p.r.bharath
Published on

ಮಡಿಕೇರಿ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಮಧ್ಯಪ್ರವೇಶ ಮಾಡಿ ಸ್ಮಶಾನದ ಜಾಗದ ಬಗ್ಗೆ ಇರುವ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನೆಲ್ಯಹುದಿಕೇರಿ ಶಾಖೆಯ ಕಾರ್ಯದರ್ಶಿ ಪಿ.ಆರ್.ಭರತ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನವಿಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಈಗಾಗಲೇ ಕಾವೇರಿ ನದಿ ದಡದಲ್ಲಿ ಅರ್ಧ ಏಕರೆಯಷ್ಟು ಇರುವ ಜಾಗದಲ್ಲಿ ಸ್ಮಶಾನವನ್ನು ಬಳಸುತ್ತಿದ್ದು ಹಲವಾರು ವರ್ಷಗಳಿಂದ ಒಂದೇ ಜಾಗವನ್ನು ಅವಲಂಬಿತರಾಗಿದ್ದಾರೆ. ಒಂದು ಶವಸಂಸ್ಕಾರ ಮಾಡಲು ನಾಲ್ಕು ಶವದ ಮೇಲೆ ಕಾಲಿಟ್ಟು ಬಹಳ ಇಕ್ಕಟ್ಟಿನಲ್ಲಿ ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸ್ಮಶಾನಕ್ಕಾಗಿ ಗುರುತು ಮಾಡಿರುವ ಸ್ಥಳ ಕೊಡುವುದಾದರೆ ನಮಗೆ ಅಭ್ಯಂತರವಿಲ್ಲ. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆಯನ್ನದಾರೂ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ, ಸರ್ಕಾರ ಸ್ಮಶಾನಕ್ಕಾಗಿ ಗುರುತು ಮಾಡಿರುವ ಸ್ಥಳ ಕೊಡುವುದಾದರೆ ನಮಗೆ ಅಭ್ಯಂತರವಿಲ್ಲ. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಸರ್ಕಾರ ಕಲ್ಪಿಸಿಕೊಡಬೇಕು. ಜಿಲ್ಲಾಡಳಿತ, ಕಂದಾಯ ಇಲಾಖೆ ಹಾಗೂ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ ಅವರು, ಅ.೨೮ ರಂದು ಮತ್ತೊಮ್ಮೆ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾರ್ವಜನಿಕರನ್ನೊಳಗೊಂಡಂತೆ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಿಪಿಐ(ಎಂ) ಪಕ್ಷದ ಸದಸ್ಯರಾದ ಟಿ.ಟಿ.ಉದಯ ಕುಮಾರ್, ಕೆ.ಕೆ.ಚಂದ್ರನ್, ಕೆ.ಶಿವರಾಮನ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net