

ವಿಜಯಪುರ : ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನೆ ಹಲವು ಬಾರಿ ತಿದ್ದುಪಡಿ ಮಾಡಿದ ಸರ್ಕಾರಕ್ಕೆ ಹೊಲಗಳ ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಕಾನೂನು ತಿದ್ದುಪಡಿ ಮಾಡುವುದು ಸವಾಲಿನ ಕೆಲಸವೇ? ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೊಲಗಳ ದಾರಿ ಕುರಿತು ದ್ವಂದ್ವ ಹೇಳಿಕೆ ನೀಡುವ ಮೂಲಕ ರಾಜ್ಯದ ರೈತರಿಗೆ ದಾರಿ ತಪ್ಪಿಸುವುದಲ್ಲದೆ ಮೋಸ ಮಾಡುತ್ತಿದ್ದಾರೆ. ಒಂದು ಕಡೆ ದಾರಿ ಮಾಡಿ ಕೊಡುವ ಅಧಿಕಾರ ತಹಸೀಲ್ದಾರರಿಗೆ ಇಲ್ಲ ನ್ಯಾಯಾಲಯಕ್ಕೆ ಹೋಗಿ ದಾರಿ ಆದೇಶ ಪಡೆದುಕೊಳ್ಳುವಂತೆ ಹೇಳುತ್ತಾರೆ. ಇನ್ನೊಂದು ಕಡೆ ನಕ್ಷೆಯಲ್ಲಿ ದಾರಿ ಇಲ್ಲದಿದ್ದರೂ ಕೂಡಾ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರು ಕೂಡಿ ದಾರಿ ಸಮಸ್ಯೆ ಬಗೆ ಹರಿಸಬೇಕೆಂದು ಪತ್ರಿಕಾ ಹೇಳಿಕೆ ಕೊಡುವ ಮೂಲಕ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ರೀತಿ ದ್ವಂದ್ವ ಹೇಳಿಕೆ ಬಿಟ್ಟು ದಾರಿ ವಿಷಯವಾಗಿ ಸ್ಪಷ್ಟವಾದ ನೀಲುವು ತಾಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೇಶಕ್ಕೆ ಅನ್ನ ಬೆಳೆದು ಕೊಡುವ ರೈತರು ದಾರಿ ಸಮಸ್ಯೆಗಾಗಿ ದಿನ ನಿತ್ಯ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ರೈತರ ಮಧ್ಯ ಹೊಡೆದಾಟಗಳು ನಡೆಯುತ್ತಿದ್ದು, ಕೆಲವೊಂದು ಭಾಗಗಳಲ್ಲಿ ಕೊಲೆಗಳು ಕೂಡ ನಡೆದಿವೆ. ಈ ಘಟನೆಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ. ದಾರಿ ಕೊಡದ ರೈತರಿಗೆ ಸರ್ಕಾರ ನೋಟಿಸ್ ನೀಡಿ ದಾರಿಗಾಗಿ ಭೂ ಸ್ವಾಧೀನ ಪಡೆಸಿಕೊಂಡು ಪರಿಹಾರವನ್ನು ಸರ್ಕಾರವೇ ಭರಿಸಿ ದಾರಿ ಸಮಸ್ಯೆಗೆ ಕೂಡಲೇ ಅಂತ್ಯ ಹಾಡಬೇಕೆಂದು ಪ್ರಕಟಣೆ ಮೂಲಕ ಸರ್ಕಾರಕ್ಕೆ ಅವರು ಆಗ್ರಹಿಸಿದ್ದಾರೆ.