

ಹಾಸನ: ಯಾರು ವಿಜ್ಞಾನದ ತತ್ವಗಳನ್ನು ಸಮಸ್ಯೆ ಬಗೆಹರಿಸಲು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವರೋ ಅವರೇ ನಿಜವಾದ ಇಂಜಿಜಿನಿಯರ್‌ಗಳು ಎಂದು ಬೆಂಗಳೂರಿನ ಇನ್ಫೋಸಿಸ್ ಫಿನಾಕಲ್‌ನ ಉತ್ಪನ್ನ ನಿರ್ವಹಣೆ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಕೃಷ್ಣಸ್ವಾಮಿ ಹೇಳಿದರು.
ನಗರದ ರಾಜೀವ್ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ರಾಜೀವ್ ಫೆಸ್ಟ್ 2ಕೆ25 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್. ಎಂ ವಿಶ್ವೇಶ್ವರಯ್ಯನವರು ಮೂಲ ವಿಜ್ಞಾನವನ್ನು ಬಳಸಿ ಕಟ್ಟಡಗಳನ್ನು, ಅಣೆಕಟ್ಟುಗಳನ್ನು ಕಟ್ಟಿದರು. ನಾಯಕನಾಗಬೇಕಾದರೆ ಕೆಲವು ಮೂಲ ಗುಣಗಳನ್ನು ಹೊಂದಿರಬೇಕು. ಯಾವುದೇ ಕ್ಷೇತ್ರದಲ್ಲಿದ್ದರೂ ಆ ಕ್ಷೇತ್ರದ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ, ಪರಿಣಿತಿ ಇರಬೇಕು. ಆಳವಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ಡೊಮೈನ್ ಜ್ಞಾನ, ಪ್ರಕ್ರಿಯೆಯ ಜ್ಞಾನ ಇತ್ತೆಂದರೆ ನಾಯಕತ್ವದ ಮೊದಲ ಹಂತ ತಲುಪಿದ್ದೀರಿ ಎಂದರ್ಥ. ಇದರ ಜತೆಗೆ ಒಳ್ಳೆಯ ಸಂವಹನ ಜ್ಞಾನ ಇರಬೇಕು. ನಾಯಕನು ತನ್ನ ತಂಡಕ್ಕೆ ಬೇಕಾಗಿರುವ ನಡವಳಿಕೆಗಳು ಮತ್ತು ಮೌಲ್ಯಗಳನ್ನು ಪ್ರದರ್ಶಿಸುವ ಮೂಲಕ ತಂಡವನ್ನು ಪ್ರೇರೇಪಿಸಿ ಮಾದರಿಯಾಗಿ ಮುನ್ನಡೆಸಬೇಕು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿ, ಕೆಪಿಟಿಸಿಲ್ ಕಿರಿಯ ಇಂಜಿನಿಯರ್ ಕಿಶೋರ್ ಕುಮಾರ್ ಮಾತನಾಡಿ, ಕಡಿಮೆ ಅಂಕಗಳನ್ನು ಪಡೆದು ಕುಗ್ಗದೆ ಮುಂದೆ ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸುವುದೇ ಸಾಧನೆ. ನಾವು ಯಾರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು. ನಾವು ಏನು ಮಾಡಬೇಕೋ ಅದರಲ್ಲಿ ಮುಖ್ಯವಾಗಿ ತೃಪ್ತಿ ಇರಬೇಕು. ಬೆಂಬಲ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ರಚನಾ ರಾಜೀವ್, ಕಠಿಣ ಪರಿಶ್ರಮ, ಉತ್ತಮ ವಿಷಯ ಜ್ಞಾನ ಮತ್ತು ಸಮರ್ಪಣಾ ಮನೋಭಾವ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ನಮ್ಮ ತಂದೆಯವರು ಕಷ್ಟ ಪಟ್ಟು ಓದಿ ವೈದ್ಯರಾಗಿ ಸಮಾಜಕ್ಕಾಗಿ ಮಾಡಿರುವ ಸೇವೆಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಸಂಸ್ಥೆ ಮುನ್ನಡೆಯಬೇಕಾದರೆ ಎಲ್ಲರ ಬೆಂಬಲ ಅತ್ಯಗತ್ಯ ಎಂದು ಹೇಳಿದರು.
ವಾರ್ಷಿಕೋತ್ಸವದ ಪ್ರಯುಕ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ವಿದ್ಯುನ್ಮಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಹರ್ಷಿತ ಕಾಲೇಜಿನ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಗಳಿಸಿದರು. ಎಲ್ಲ ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ವಾಸುದೇವ ರಾವ್, ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಎನ್ ರತ್ನಾ, ಆರ್.ಕೆ. ಏಜೆನ್ಸಿಸ್‌ನ ಮಾಲೀಕ ಬಿ.ಎನ್ ಕೀರ್ತಿ, ರಾಜೀವ್ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಡಾ. ಎಂ.ಆರ್.ಶಂಕರೇಗೌಡ ಉಪಸ್ಥಿತರಿದ್ದರು.