

ಮುಳಬಾಗಿಲು: ಸಾಮಾಜಿಕ ಜವಾಬ್ದಾರಿ, ಸಮುದಾಯದ ಕಾಳಜಿ ಇದ್ದರೆ ನಮ್ಮ ಅಧಿಕಾರಾವಧಿ ಮುಗಿದ ನಂತರವೂ ಜನರು ನೆನಪಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ಕೆಲಸಕ್ಕೂ ಶಾಸಕರು ಸರ್ಕಾರವನ್ನು ಅವಲಂಬಿಸದೆ ಸ್ವಪ್ರೇರಣೆಯಿಂದ ಕಾರ್ಯನಿರ್ವಹಿಸಿದಾಗ ಬಹುತೇಕ ಸಮಸ್ಯೆಗಳನ್ನು ಭೌತಿಕವಾಗಿ ಬಗೆಹರಿಸಬಹುದು ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ತಾಲೂಕಿನ ಕನ್ನಸಂದ್ರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ, ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಗೆ ಬರುವ ರಸ್ತೆ ಅಭಿವೃದ್ಧಿಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಮಾಡಬಹುದು, ಸಣ್ಣಪುಟ್ಟ ಹಳ್ಳಗಳನ್ನು ಸರಿಪಡಿಸಲು ಶಾಸಕರೇ ಬರಬೇಕೆಂಬುದು ಸರಿಯಲ್ಲ. ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಶ್ರಮದಾನ ಮಾಡಿ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮಾದರಿಯಾಗಬೇಕು ಎಂದರು.
ಈ ಶಾಲೆ ತುಂಬಾ ಅಚ್ಚುಕಟ್ಟಾಗಿದ್ದು, ಶಾಸಕರ ಅನುದಾನದಿಂದ 10 ಲಕ್ಷ ರೂ. ವೆಚ್ಚದಲ್ಲಿ ಕೊಠಡಿಯನ್ನು ನಿಮಾರ್ಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮೂಡಿಸಬೇಕು ಎಂದರು.
ಶಾಲೆಯಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಆಟದ ಮೈದಾನ ಇಲ್ಲ. ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಸೂಕ ಸ್ಥಳ ಗುರುತಿಸಿ ಶಾಲೆಗೆ ಗುಣಮಟ್ಟದ ಆಟದ ಮೈದಾನ ನಿರ್ಮಿಸಿ ಕೊಡಲಾಗುವುದು ಎಂದರು.
ಇಲ್ಲಿನ ಹಳೆ ವಿದ್ಯಾರ್ಥಿಗಳು ಉನ್ನತ ಮಟ್ಟದ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಎಲ್ಲರೂ ಸಹ ಶಾಲೆಗೆ ಹಲವಾರು ರೀತಿಯ ಸೌಲಭ್ಯಗಳನ್ನು ಮಾಡಿಕೊಡಲು ಅನುಕೂಲ ಮಾಡಿದಾಗ ಶಾಲೆ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ. ತಾಲೂಕಿಗೆ ಮಾದರಿ ಶಾಲೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಶಿಕ್ಷಕರಾದ ಎಂ.ನಾರಾಯಣಪ್ಪ, ಎನ್.ಶೈಲಜಾ, ಕೆ.ವಿ.ಶಾಂತಮ್ಮ, ಎಸ್ಡಿಎಂಸಿ ಅಧ್ಯಕ್ಷ ಮುನಿಕೃಷ್ಣ,ಕರಡಗೂರು ಯಲ್ಲಪ್ಪ, ಜೋಗಲಕಾಷ್ಟಿ ಆಂಜಪ್ಪ, ಸಿಆರ್ಪಿ ಶಾಹೀನಾ ಇದ್ದರು.