ವಿದ್ಯುತ್, ರಸ್ತೆ ಸಮಸ್ಯೆ ಪರಿಹರಿಸಿ

Solve electricity and road problems
ಬಸವನಬಾಗೇವಾಡಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಅರವಿಂದ ಕುಲಕರ್ಣಿ, ಬಸನಗೌಡ ಬಿರಾದಾರ, ಸಂಗಪ್ಪ ಪಡಸಲಗಿ ಇತರರಿದ್ದರು.
Published on

ಬಸವನಬಾಗೇವಾಡಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಹಾಗೂ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇತ್ಯರ್ಥ್ಯಪಡಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತ್ಯೇಕವಾಗಿ ಗ್ರೇಡ್-2 ತಹಸೀಲ್ದಾರ್ ಜಿ.ಎಸ್. ನಾಯಕ ಹಾಗೂ ಹೆಸ್ಕಾಂ ಅಧಿಕಾರಿ ಸಿದ್ದರಾಮ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ರೈತ ಸಂಘದ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ರೈತರು ಬಸವೇಶ್ವರ ವೃತ್ತದ ಮೂಲಕ ಗಣಪತಿ ಚೌಕ್ ಮಾರ್ಗವಾಗಿ ಮೆರವಣಿಗೆ ಮೂಲಕ ಹೆಸ್ಕಾ ಕಚೇರಿ ಹಾಗೂ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.

ಕೆಲ ಹೊತ್ತು ಎರಡೂ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು. ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈಗಾಗಲೇ ಜೂನ್ ತಿಂಗಳು ಅರ್ಧ ಕಳೆದರೂ ಮುಂಗಾರು ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ತೆರೆದ ಬಾವಿಯಲ್ಲಿ ಹಾಗೂ ಕೊಳವೆಬಾವಿಯಲ್ಲಿರುವ ಅಲ್ಪಸ್ವಲ್ಪ ನೀರನ್ನು ಬಳಸಲು ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ ಎಂಟು ತಾಸು ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಕುರಿತು ಕೂಡಲೇ ಸರ್ಕಾರ ಅಧಿಸೂಚನೆ ಹೊರಡಿಬೇಕು. ಅಖಂಡ ಕರ್ನಾಟಕ ರೈತ ಸಂಘ ನಡೆಸಿದ್ದ ಹೋರಾಟವನ್ನು ಗಣನೆಗೆ ತೆಗೆದುಕೊಂಡಿದ್ದ ಹಿಂದಿನ ಬಿಜೆಪಿ ಸರ್ಕಾರ ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕರೆದಿದ್ದ ಜಿಲ್ಲಾಧಿಕಾರಿ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವ ಜಿ. ಮಾಧುಸ್ವಾಮಿ ನಿರ್ಣಯಿಸಿದ್ದರು. ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥ ಪಡಿಸಲು ತಹಸೀಲ್ದಾರ್‌ರಿಗೆ ಅಧಿಕಾರ ನೀಡಲಾಗಿದ್ದು, ಈ ಕುರಿತು ಶೀಘ್ರದಲ್ಲಿ ಕಾನೂನು ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಸಭೆಯಲ್ಲಿ ಘೋಷಣೆ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಕೊನೆಗೂ ಅಧಿಸೂಚನೆ ಹೊರಡಿಸಲಿಲ್ಲ. ರಾಜ್ಯದಲ್ಲಿ ಸದ್ಯದ ಕಾಂಗ್ರೆಸ್ ಸರ್ಕಾರ ದಾರಿ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಕಾನೂನು ತಿದ್ದುಪಡಿ ಮಾಡಿ ಅನುಭೋಗದ ಹಕ್ಕಿನಡಿ ಮರಳಿ ತಹಸೀಲ್ದಾರ್‌ರಿಗೆ ಅಧಿಕಾರ ನೀಡಿ ಅಧಿಸೂಚನೆ ಹೊರಡಿಸಿ ದಾರಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.

ರೈತರಾದ ಬಸನಗೌಡ ಬಿರಾದಾರ, ಸಂಗಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಡಮನಿ, ಬಸಪ್ಪ ದೊಡಮನಿ, ಲಾಲಪ್ಪ ದೊಡಮನಿ, ಭೀಮಪ್ಪ ಸುಂಟ್ಯಾಣ, ಹಣಮಂತರಾಯ ಬಿರಾದಾರ, ಗುರಪ್ಪ ದಳವಾಯಿ, ವಿಜಯ ಬಿರಾದಾರ, ಚನ್ನಬಸಪ್ಪ ಸಿಂಧೂರ, ಶಿವಪ್ಪ ಸುಂಟ್ಯಾಣ, ಬಸಪ್ಪ ಮಾಡ್ಯಾಳ, ಗುರಣ್ಣ ರೂಗಿ, ಪರಸು ನಾಯೋಡಿ, ದಾವಲಸಾಬ ನದಾಫ್, ಬಸಪ್ಪ ದೊಡಮನಿ, ಹಣಮಂತ ಮದಗಿನಾಳ, ಬಸಗೊಂಡಪ್ಪ ಕೀರಸಾವಳಗಿ, ಬಸವರಾಜ ಸುಂಟ್ಯಾಣ, ಮಹೇಶ ದಿನ್ನಿ, ಲಚ್ಚಪ್ಪ ಮಾದರ, ಶರಣಪ್ಪ ಹೂಗಾರ, ಹಣಮಂತ ಮುರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net