ಮದ್ದೂರು ಜ್ವಲಂತ ಸಮಸ್ಯೆಗಳ ಬಗೆಹರಿಸಿ

09M.D.R.3
ಮದ್ದೂರು ತಾಲೂಕಿನ ವಿವಿಧ ಜ್ವಲಂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಶಾಸಕ ಕೆ.ಎಂ.ಉದಯ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ಬಾಲದಂಡಿ, ಶೇಕ್ ತನ್ವೀರ್ ಆಸೀಫ್, ಶಿವಮೂರ್ತಿ, ತಿಪ್ಪೂರು ರಾಜೇಶ್, ಮಹೇಂದ್ರ, ಶ್ರೀನಿವಾಸ್, ರಾಜು, ಮಹಾಲಿಂಗ, ರಮೇಶ್ ಇದ್ದರು.
Published on

ಮದ್ದೂರು: ತಾಲೂಕಿನ ವಿವಿಧ ಜ್ವಲಂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಶಾಸಕ ಕೆ.ಎಂ.ಉದಯ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.


ವಿ.ಸಿ.ಉಮಾಶಂಕರ್ ಮಾತನಾಡಿ, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಕಾಮಗಾರಿಯ ಅಪೂರ್ಣವಾಗಿದ್ದು, ಚರಂಡಿ ಮತ್ತು ಒಳ ಚರಂಡಿಯ ನೀರು ಹೆದ್ದಾರಿಯಲ್ಲಿ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಹೆದ್ದಾರಿಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ ಹಾಗೂ ಕೊಲ್ಲಿ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ಮಾಡುವುದರಿಂದ ಇಲ್ಲಿಗೆ ಹೈಮಾಸ್ಟ್ ದೀಪ ಅಳವಡಿಸಬೇಕು ಮತ್ತು ಒಬ್ಬ ಸಂಚಾರ ಪೇದೆಯನ್ನು ಕಾಯಂ ಆಗಿ ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.


ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ಮದ್ದೂರಿನಿಂದ ಕೊಪ್ಪ, ಕೆ.ಬೆಳ್ಳೂರು ಹಾಗೂ ಮಳವಳ್ಳಿ ಮಾರ್ಗದ ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದು, ಇದರಿಂದ ಅನೇಕ ಸಾವು-ನೋವುಗಳು ಸಂಭವಿಸುತ್ತಿವೆ. ಆದ್ದರಿಂದ ಶೀಘ್ರ ಗುಂಡಿಗಳನ್ನು ಮುಚ್ಚಿ ಅನಾಹುತ ತಪ್ಪಿಸುವಂತೆ ತಿಳಿಸಿದರು.
ಕೆಮ್ಮಣ್ಣುನಾಲೆಗೆ ಹಾಗೂ ಶಿಂಷಾ ನದಿಗೆ ಪಟ್ಟಣದ ಒಳಚರಂಡಿ ನೀರು ಹರಿಯುತ್ತಿದ್ದು, ಇದರಿಂದ ಜಲ ಮೂಲ ಕಲುಷಿತಗೊಳ್ಳುತ್ತಿದೆ. ತಾಲೂಕಿನ ಕೆ.ಕೊಡಿಹಳ್ಳಿ ಹಾಗೂ ಸೋಮನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಕೆರೆಗಳನ್ನು ತುಂಬಿಸಲು ಏತ ನೀರಾವರಿ ಯೋಜನೆ ಕೈಗೊಂಡಿತ್ತು. ಆದರೆ ಯೋಜನೆಗಳು ಸ್ಥಗಿತಗೊಂಡಿರುವುದರಿಂದ ನೀರಾವರಿ ಯೋಜನೆಗೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಶಾಸಕ ಕೆ.ಎಂ.ಉದಯ್, ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಕ್ ತನ್ವೀರ್ ಆಸೀಫ್, ಎಸಿ ಶಿವಮೂರ್ತಿ, ವೇದಿಕೆಯ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಕೊಪ್ಪ ಹೋಬಳಿ ಅಧ್ಯಕ್ಷ ಮಹೇಂದ್ರ, ಮಾಜಿ ಯೋಧ ಶ್ರೀನಿವಾಸ್, ಮುಖಂಡರಾದ ವಿ.ಎಚ್.ಶಿವಲಿಂಗಯ್ಯ, ಯರಗನಹಳ್ಳಿ ಮಹಾಲಿಂಗ, ತೂಬಿನಕೆರೆ ರಾಜು, ವಿ.ಎಂ.ರಮೇಶ, ರವಿ, ಪಟೇಲ್ ಹರೀಶ್, ಯಾಕುಬ್. ಪರಶುರಾಮ, ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net