ಸಭೆಗಳಿಂದ ಸಮಸ್ಯೆಗೆ ಪರಿಹಾರ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಮತ, 2ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಸಮಿತಿ ಸಭೆ

jilla jagruti sabe
Published on

ಬೆಂಗಳೂರು ಗ್ರಾಮಾಂತರ: ಕಳೆದ ಬಾರಿಯಿಂದ ತಾಲೂಕುಮಟ್ಟ ಹಾಗೂ ಉಪ ವಿಭಾಗಮಟ್ಟದಲ್ಲಿ ಸಭೆ ನಡೆಯುತ್ತಿರುವುದು ಆಡಳಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಸಮಸ್ಯೆಗಳು ಮೂಲದಲ್ಲಿಯೇ ಪರಿಹಾರವಾಗಬೇಕಾದರೆ ಇಂತಹ ಸಭೆ ನಡೆಸುವುದು ಹೆಚ್ಚು ಸೂಕ್ತ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ 2ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸಮಸ್ಯೆಗಳಿಗೆ ಮೂಲದಲ್ಲಿಯೇ ಪರಿಹಾರ ಒದಗಿಸಿಕೊಡಲು ಸಾಧ್ಯವಾಗಲಿದೆ ಎಂದರು.

ಅಧಿಕಾರಿಗಳಲ್ಲಿ ಜನಸ್ಪಂದನ ಮನೋಭಾವ ಇರಬೇಕು, ಯಾವುದೇ ಸಭೆಗಳಾದರು ಅಧಿಕಾರಿ ವರ್ಗ ಗಂಭೀರವಾಗಿ ಪರಿಗಣಿಸಬೇಕು ಜತೆಗೆ ಸೂಕ್ತ ಹಾಗೂ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದರು.

ಉತ್ತಮ ಕಾರ್ಯದಿಂದ ಉತ್ತಮ ಆಡಳಿತ: ನ್ಯಾಯಾಂಗದಲ್ಲಿರುವ ಪ್ರಕರಣ ಹೊರತುಪಡಿಸಿ, ಉಳಿದಂತೆ ದೌರ್ಜನ್ಯ ಪ್ರಕರಣಗಳನ್ನು ಸಕಾಲದಡಿ ಸೇರಿಸಲಾಗಿದೆ. ಸಮಿತಿ, ಸಭೆಗಳು ಇರುವುದೇ ದೌರ್ಜನ್ಯ ತಡೆಗಟ್ಟಲು ಹಾಗೂ ಈಗಾಗಲೇ ನಡೆದಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪರಿಹಾರ ಒದಗಿಸಲು ಎಂದ ಜಿಲ್ಲಾಧಿಕಾರಿ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನ್ಯಾಯಾಂಗದಲ್ಲಿರುವ ಸರ್ಕಾರಿ ಜಮೀನುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಸರ್ಕಾರಿ ವಕೀಲರನ್ನು ಭೇಟಿಯಾಗಿ ದಾಖಲೆಗಳನ್ನು ಒದಗಿಸಿಸಬೇಕು, ಸರ್ಕಾರದ ಸ್ವತ್ತೆಂದು ವಾದ ಮಂಡಿಸಿ, ತಡೆಯಾಜ್ಞೆ ತೆರವುಗೊಳಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತುರ್ತು ಪರಿಶೀಲನೆ ಅಗತ್ಯ: ನೆರೆಯ ಒಡಿಶಾ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ವಾಸವಿರುವ ಹಲವರ ಹೆಸರಲ್ಲಿ ಜಿಲ್ಲೆಯಲ್ಲಿ ಬಹಳ ನಿವೇಶನಗಳಿವೆ, ಆದರೆ ಮೂಲ ನಿವಾಸಿಗಳಿಗೆ ಮನೆಯಿಲ್ಲದಂತಾಗಿದೆ ಎಂದು ಜಾಗೃತಿ ಸಮಿತಿ ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬೋಗಸ್ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಲಾಗಿದೆಯೇ ಎಂದು ಪರಿಶೀಲಿಸಬೇಕು ಹಾಗೂ ಖಾಲಿ ನಿವೇಶನಗಳಲ್ಲಿ ಮಂಜೂರಾತಿ, ಅಧಿಕೃತ, ಅನಧಿಕೃತ ಮನೆ ನಿರ್ಮಾಣದ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಪೂರ್ಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಕರಣ ಶೀಘ್ರ ವಿಲೇ: ಸಮಾಜ ಕಲ್ಯಾಣ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಾಕ್ಷ್ಯಾಧಾರಗಳ ವಿಡಿಯೋಗ್ರಫಿ ಮಾಡಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್ ತಿಳಿಸಿದರು.

ದೊಡ್ಡಬಳ್ಳಾಪುರದ ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಅಪ್ರಾಪ್ತರು ದಾರಿ ತಪ್ಪದಂತೆ, ಬಾಲ್ಯ ವಿವಾಹವಾಗದಂತೆ, ಶಿಕ್ಷಣದ ಮಹತ್ವದ ಕುರಿತು ವಿವಿಧ ಇಲಾಖೆ ಹಾಗೂ ಜಾಗೃತಿ ಸಮಿತಿ ಸದಸ್ಯರು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪೋಕ್ಸೋ ಕಾಯ್ದೆಯಡಿ ದಾಖಲಾಗುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net