ಕಾಳಮ್ಮನಗರದ ವಿದ್ಯುತ್ ಸಮಸ್ಯೆಗೆ ಪರಿಹಾರ

22KWR-Shantaram Siddi
Published on

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ಪರಿಶಿಷ್ಟ ಪಂಗಡ, ಜಾತಿ ಹಾಗೂ ಇತರೆ ವರ್ಗದ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದ ವಿಚಾರವನ್ನು ಸೋಮವಾರ ವಿಧಾನ ಪರಿಷತ್​ನಲ್ಲಿ ಸದಸ್ಯ ಶಾಂತಾರಾಮ ಸಿದ್ದಿ ಅವರು ಪ್ರಸ್ತಾಪಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾರಣರಾದರು.

ಯಲ್ಲಾಪುರದ ಕಾಳಮ್ಮನಗರದಲ್ಲಿ ಪರಿಶಿಷ್ಟ ಪಂಗಡದ 15, ಪ.ಜಾತಿಯ 9 ಹಾಗೂ ಇತರೆ ವರ್ಗದ 23 ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಂತಾರಾಮ ಸಿದ್ದಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ಆದರೆ, ತಾಂತ್ರಿಕವಾಗಿ ಸಮಸ್ಯೆಯಿದೆ. ಅವರು ಆ ಸ್ಥಳದಲ್ಲಿ ವಾಸ್ತವ್ಯ ಮಾಡುವ ಬಗ್ಗೆ ದಾಖಲಾತಿ ಅಗತ್ಯ. ಆ ಬಗ್ಗೆ ಸ್ಥಳೀಯ ಆಡಳಿತದಿಂದ ಧೃಢೀಕರಣ ಪತ್ರ ನೀಡಿದಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು. ಮಧ್ಯಪ್ರವೇಶಿಸಿದ ಶಾಂತಾರಾಮ ಸಿದ್ದಿ, ಆ ಜನರು ಮನೆ, ಆಧಾರ ಕಾರ್ಡ್, ಪಡಿತರ ಚೀಟಿ, ನೀರಿನ ಸಂಪರ್ಕ ಹೊಂದಿದ್ದಾರೆ. ಇದೆಲ್ಲವೂ ಸರ್ಕಾರದ ವ್ಯವಸ್ಥೆಯೇ ಅಲ್ಲವೆ? ಈ ವ್ಯವಸ್ಥೆಗಳನ್ನು ಹೊಂದಿದ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡುವುದಕ್ಕೇನು ಸಮಸ್ಯೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ನನ್ನ ಗಮನಕ್ಕಿರಲಿಲ್ಲ. ಇದೇ ಆಧಾರದ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ಪರಿಶಿಷ್ಟ ಪಂಗಡದವರ ಸಮಸ್ಯೆ ಹೇಳಿಕೊಳ್ಳುವುದು ಯಾರಲ್ಲಿ?: ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಯಾರಲ್ಲಿ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಇಲಾಖೆಗೆ ಪ್ರತ್ಯೇಕ ಸಚಿವರಿಲ್ಲ. ಮುಖ್ಯಮಂತ್ರಿಗಳೇ ಖಾತೆಯನ್ನು ಹೊಂದಿದ್ದು, ನಮಗೆ ಬೇಕಾದಾಗ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲ ಎಂದು ಶಾಂತಾರಾಮ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net