

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಲ್ಲಿ ದೀರ್ಘ ಅವಧಿಯಿಂದ ಇತ್ಯರ್ಥ ಕಾಣದ ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಹೊಸ ವೇದಿಕೆಯೊಂದನ್ನು ರೂಪಿಸಲಾಗಿದೆ.
ಇದರನ್ವಯ ಸಾರ್ವಜನಿಕರು ತಮ್ಮ ದೂರನ್ನು ಸಂಕ್ಷಿಪ್ತವಾಗಿ ವಾಟ್ಸ್‌ಆ್ಯಪ್ ಮೂಲಕ ಪ್ರಾಧಿಕಾರಕ್ಕೆ ಕಳುಹಿಸಿದರೆ 30 ದಿನಗಳೊಳಗೆ ಪರಿಹರಿಸಲಾಗುತ್ತದೆ. ತಪ್ಪಿದ್ದಲ್ಲಿ ಸ್ವತ: ಆಯುಕ್ತರೇ ಖುದ್ದು ಆಸ್ಥೆ ವಹಿಸಿ ಅಧ್ಯಕ್ಷರ ಸಮಕ್ಷಮ ಪರಿಹಾರ ಒದಗಿಸಲಿದ್ದಾರೆ. ಇಂಥದ್ದೊಂದು ವಿನೂತನ ನಾಗರಿಕ ಸ್ಪಂದನಾ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಪ್ರಾಧಿಕಾರದ ಆಯುಕ್ತ ಪಿ.ಮಣಿವಣ್ಣನ್ ಮುಂದಾಗಿದ್ದಾರೆ.
ಸಮಸ್ಯೆಗೆ ಒಳಗಾದವರು ಬಿಡಿಎನ ವಾಟ್ಸ್‌ಆ್ಯಪ್ ಸಂಖ್ಯೆಗೆ (9483166622) ನೇರವಾಗಿ ಮಾಹಿತಿ ಒದಗಿಸಬೇಕು. ಈ ದೂರನ್ನು ನೀಡಲು ಖುದ್ದು ಕಚೇರಿಗೆ ಬರುವ ಅಗತ್ಯ ಇಲ್ಲ. ದೂರು ಆಧರಿಸಿ ಸಂಬಂಧಿಸಿದ ವಿಭಾಗಕ್ಕೆ ರವಾನಿಸಿ ಕೇಸ್ ವರ್ಕರ್ ಮೂಲಕ ಪರಿಹಾರ ನೀಡಲಾಗುತ್ತದೆ. ಈ ಹಂತದಲ್ಲಿ ಪರಿಹಾರ ಕಾಣದಿದ್ದಲ್ಲಿ ಆಯಾ ವಿಭಾಗದ ಮುಖ್ಯಸ್ಥರು 30 ದಿನಗಳಲ್ಲಿ ಪರಿಹರಿಸಲಿದ್ದಾರೆ. ಇದರ ಹೊರತಾಗಿಯೂ ದೂರು ಕ್ಲಿಷ್ಟವಾಗಿದ್ದಲ್ಲಿ ಬಿಡಿಎ ಅಧ್ಯಕ್ಷರೊಂದಿಗೆ ಮುಖಾಮುಖಿ ಭೇಟಿಯಾಗಿ ಚರ್ಚಿಸಿ ಪರಿಹಾರ ಮಾಡಿಕೊಡಲಾಗುತ್ತದೆ. ಇಂತಹ ಗಂಭೀರ ಪ್ರಕರಣಗಳನ್ನು ಸ್ವತ: ಆಯುಕ್ತರು ನಿಗಾ ವಹಿಸಲಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಮಾಹಿತಿ ನೀಡಿರುವ ಆಯುಕ್ತರು ಹೊಸ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದು. ಬಹುಕಾಲದಿಂದ ಇತ್ಯರ್ಥವಾಗದ ದೂರುಗಳನ್ನು ಕಾಲಮಿತಿಯೊಳಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಒದಗಿಸಲು ಪಾರದರ್ಶಕ ಆಡಳಿತ ಹಾಗೂ ತಂತ್ರಜ್ಞಾನದ ಮೊರೆ ಹೋಗಿರುವುದಾಗಿ ಹೇಳಿದ್ದಾರೆ. ಕಾನೂನು ಸಂಬಂಧಿತ, ಕೋರ್ಟ್ ವ್ಯಾಜ್ಯವಿರುವ ಪ್ರಕರಣಗಳನ್ನು ಹೊಸ ವ್ಯವಸ್ಥೆಯಿಂದ ಹೊರತುಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೈಟ್ ಹಂಚಿಕೆ ಪ್ರಕರಣಗಳ ಇತ್ಯರ್ಥ ಅನುಮಾನ:
ಹೊಸದಾಗಿ ಪರಿಚಯಿಸಲಾಗುತ್ತಿರುವ ನಾಗರಿಕ ಸ್ಪಂದನೆಯಲ್ಲಿ ಬಿಡಿಎಗೆ ಸೇರಿದ ವಿವಿಧ ಬಡಾವಣೆಗಳ ಸೈಟ್ ಹಂಚಿಕೆ ಪ್ರಕರಣಗಳನ್ನು ಪರಿಗಣಿಸಲಾಗುತ್ತದೆ ಎಂಬುದು ಖಾತ್ರಿಪಡಿಸಿಲ್ಲ. ಹಲವು ವರ್ಷಗಳಿಂದ ಅರ್ಹತೆ ಇದ್ದರೂ, ನಿವೇಶನ ಹಂಚಿಕೆಯಾಗದ ಪ್ರಕರಣಗಳು ಸಾಕಷ್ಟಿವೆ. ಅದರಲ್ಲೂ ಅರ್ಕಾವತಿ ಲೇಔಟ್, ಕೆಂಪೇಗೌಡ ಲೇಔಟ್ ಸಹಿತ ಇನ್ನಿತರ ಬಡಾವಣೆಗಳಲ್ಲಿ ಅರ್ಜಿದಾರರು ಎಲ್ಲ ಶುಲ್ಕ ಹಾಗೂ ದಾಖಲಾತಿ ನೀಡಿದ್ದರೂ, ನೋಂದಣಿ ಮಾಡಿಕೊಟ್ಟಿಲ್ಲ. ಇನ್ನೂ ಕೆಲವಕ್ಕೆ ದಾಖಲೆಪತ್ರಗಳನ್ನು ವಿತರಿಸಿಲ್ಲ. ಇಂತಹ ನೂರಾರು ಪ್ರಕರಣಗಳಲ್ಲಿ ತಾಂತ್ರಿಕ ನೆಪವೊಡ್ಡಿ ಜನರಿಗೆ ಸೌಲಭ್ಯ ಒದಗಿಸಲು ಪ್ರಾಧಿಕಾರ ಮೀನಮೇಷ ಎಣಿಸುತ್ತಿದೆ. ಹಾಗಾಗಿ ಆಯುಕ್ತರು ಆರಂಭಿಸಲಿರುವ ಹೊಸ ವ್ಯವಸ್ಥೆಯಿಂದ ನಮಗೆ ನ್ಯಾಯ ಸಿಗುವುದೇ ಎಂಬ ಅನುಮಾನವನ್ನು ಸೈಟ್ ಹಂಚಿಕೆದಾರರು ವ್ಯಕ್ತಪಡಿಸಿದ್ದಾರೆ.